ADVERTISEMENT

32ನೇ ಜಿಲ್ಲೆ: ಕಟೀಲ್‌ ಹೇಳಿಕೆಗೆ ವ್ಯಂಗ್ಯ

‘ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರ ನಡುವೆ ಕಿತ್ತಾಟ ನಡೆದಿಲ್ಲ’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:46 IST
Last Updated 17 ಅಕ್ಟೋಬರ್ 2019, 19:46 IST
ನಳಿನ್‌ ಕುಮಾರ್‌ ಕಟೀಲ್
ನಳಿನ್‌ ಕುಮಾರ್‌ ಕಟೀಲ್   

ಯಾದಗಿರಿ: ಗುರುವಾರ ನಗರಕ್ಕೆ ಬಂದಿದ್ದಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್,‘ಪಕ್ಷ ಸಂಘಟನೆಗಾಗಿ ನಾನು ಈಗಾಗಲೇ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಈಗ,32ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಕಟೀಲ್‌ ಅವರಿಗೆ ರಾಜ್ಯದಲ್ಲಿರುವ ಜಿಲ್ಲೆಗಳ ಬಗ್ಗೆ ಮಾಹಿತಿ ಇಲ್ಲವೆ ಎಂದು ಅಲ್ಲಿದ್ದವರು ಪರಸ್ಪರ ಮುಖ ನೋಡಿಕೊಂಡರು. ಆದರೂ, ಅವರು ತಮ್ಮ ತಪ್ಪು ತಿದ್ದಿಕೊಳ್ಳಲಿಲ್ಲ.

ಇದಕ್ಕೆ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಸಮಿತಿ, ‘ನಳಿನ್‌ ಕುಮಾರ್‌ ಕಟೀಲ್‌ ಅವರೇ, ರಾಜ್ಯದಲ್ಲಿರುವುದು 32 ಜಿಲ್ಲೆಗಳಾ? ರಾಜ್ಯದಲ್ಲೆಷ್ಟು ಜಿಲ್ಲೆಗಳಿವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ನೀವು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದೀರಿ ಮತ್ತು ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿದ್ದೀರಿ. ಪ್ರಾಥಮಿಕ ಶಾಲೆಯ ಪಠ್ಯಪುಸ್ತಕವನ್ನೊಮ್ಮೆ ಕೊಂಡು ಓದಿ. ಕನಿಷ್ಠ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಿ’ ಎಂದು ವ್ಯಂಗ್ಯವಾಡಿದೆ.

ADVERTISEMENT

ಕಿತ್ತಾಟ ಇಲ್ಲ:‘ಬಿಜೆಪಿ ರಾಜ್ಯ ಕಚೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನನ್ನ ಬೆಂಬಲಿಗರು ಕಿತ್ತಾಡಿಕೊಂಡಿಲ್ಲ. ಲಿಂಗಾಯತ ಮತ್ತೊಂದು ಎನ್ನುವ ಬೇಧಭಾವವಿಲ್ಲ. ಇದೆಲ್ಲ ಸಾಮಾಜಿಕ ಜಾಲತಾಣಗಳಿಂದ ಆಗಿರುವ ತಪ್ಪುಕಲ್ಪನೆ’ ಎಂದು ನಳಿನ್ ಕುಮಾರ್‌ ಕಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ನನ್ನ ಮತ್ತು ಯಡಿಯೂರಪ್ಪ ಮಧ್ಯೆ ಸಣ್ಣ ವ್ಯತ್ಯಾಸವೂ ಇಲ್ಲ. ಬಿಜೆಪಿ ರಾಜ್ಯ ಘಟಕಕ್ಕೆ ಅವರೇ ಸುಪ್ರೀಂ. ಹೀಗಾಗಿ ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದೇನೆ. ಆದರೂ ಸುಳ್ಳು ಸುದ್ದಿ ಹಬ್ಬುತ್ತಿದೆ’ ಎಂದರು.

‘ಉತ್ತರ ನೀಡದಿದ್ದರೆ ಅಹಂಕಾರವಾಗುತ್ತೆ’: ‌‘ಪಕ್ಷಕ್ಕೆ ಅದರದ್ದೇ ಆದ ನೀತಿ, ಚೌಕಟ್ಟಿದೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ ಇದ್ದಂತೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮಗೆ ನೀಡಿರುವ ನೋಟಸ್‌ಗೆ ಉತ್ತರ ನೀಡದಿದ್ದರೆ ಅದು ಅಹಂಕಾರವಾಗುತ್ತೆ’ಎಂದು ನಳಿನ್‌ಕುಮಾರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.