ಬೆಂಗಳೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ಅಧಿಕಾರಿಗಳು ಶುಕ್ರವಾರ ರಾಜ್ಯದ ವಿವಿಧೆಡೆ 94 ಕ್ಲಿನಿಕ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 33 ನಕಲಿ ವೈದ್ಯರನ್ನು ಪತ್ತೆ ಮಾಡಿದ್ದಾರೆ.
ಈ ಪೈಕಿ 15 ನಕಲಿ ವೈದ್ಯರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ. ಉಳಿದವರು ಪರಾರಿ ಯಾಗಿದ್ದಾರೆ. ಜಿಲ್ಲಾ ಆಯುಷ್ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾದ ನಕಲಿ ವೈದ್ಯರ ತಡೆ ತಂಡ ಆಯಾ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆ ಕೈಗೊಂಡಿತ್ತು.
ವೈದ್ಯ ಪದವೀಧರರಲ್ಲದ ಹಾಗೂ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡದೆ ವೈದ್ಯ ವೃತ್ತಿ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್‌ಗಳ ಮೇಲೆ ಈ ತಂಡ ದಾಳಿ ಮಾಡಿತು.
ಮೈಸೂರಿನಲ್ಲಿ ಅತಿ ಹೆಚ್ಚು ಅಂದರೆ 15 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಹಲವರು ದಾಳಿಯ ವಿಷಯ ತಿಳಿದು ಅಲ್ಲಿಂದ ಪರಾರಿಯಾಗಿದ್ದಾರೆ.
ಕರ್ನಾಟಕ ವೈದ್ಯಕೀಯ ಪರಿಷತ್, ಆಯರ್ವೇದ ಮತ್ತು ಯುನಾನಿ ಪದ್ಧತಿ ಮಂಡಳಿ ಹಾಗೂ ಹೊಮಿಯೋಪತಿ ಮಂಡಳಿಯಲ್ಲಿ ಅಧಿಕೃತ ನೋಂದಣಿ ಮಾಡಿಸದ ವೈದ್ಯರ ವಿರುದ್ಧ ಮತ್ತು ವೈದ್ಯ ಪದವಿ ಇಲ್ಲದಿದ್ದರೂ ‘ಡಾ’ ಎಂದು ಹೆಸರಿನ ಹಿಂದೆ ಸೇರಿಸಿ ಕೊಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಮಂಡಳಿ ಹೊಂದಿದೆ ಎಂದು ಕರ್ನಾಟಕ ಆಯುರ್ವೆದ ಮತ್ತು ಯುನಾನಿ ವೈದ್ಯ ಮಂಡಳಿ ಅಧ್ಯಕ್ಷ ಡಾ. ಸತ್ಯಮೂರ್ತಿ ಭಟ್ ತಿಳಿಸಿದರು.
‘ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಇರುವುದು ನಕಲಿ ವೈದ್ಯರ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಅಸಲಿ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಆಸಕ್ತಿ ತೋರಿದರೆ ನಕಲಿ ವೈದ್ಯರ ಹಾವಳಿಯನ್ನು ಸಹ ತಡೆಗಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.
‘ಮಂಡಳಿ ನೀಡುವ ದೂರು ಆಧರಿಸಿ ಪೊಲೀಸರು ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುತ್ತಾರೆ. ಕ್ಲಿನಿಕ್‌ಗಳನ್ನು ಸಹ ಬಂದ್ ಮಾಡಲಾಗುವುದು. ಕ್ಲಿನಿಕ್ ಬೀಗ ಪೊಲೀಸ್ ವಶದಲ್ಲಿರುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.