ADVERTISEMENT

371 (ಜೆ) ಸಮಿತಿ ಸಭೆ; ಮತ್ತದೇ ಭರವಸೆ

* ಉಪ ಸಮಿತಿ ಸಭೆಗೆ ಮೂವರು ಸಚಿವರ ಗೈರು * ನೇಮಕಾತಿ ಗೊಂದಲದ ಸುತ್ತೋಲೆ ವಾಪಸಾತಿ ಬೇಡಿಕೆಗೆ ಸಿಗಲಿಲ್ಲ ಮುಕ್ತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 14:43 IST
Last Updated 11 ಫೆಬ್ರುವರಿ 2022, 14:43 IST
ಕಲಬುರಗಿಯ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಶುಕ್ರವಾರ ನಡೆದ  371 (ಜೆ) ಕಲಂ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಯ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಶ್ರೀರಾಮುಲು ಮಾತನಾಡಿದರು. ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಚಿವ ಮುರುಗೇಶ ನಿರಾಣಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಇದ್ದರು
ಕಲಬುರಗಿಯ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಶುಕ್ರವಾರ ನಡೆದ  371 (ಜೆ) ಕಲಂ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಯ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಶ್ರೀರಾಮುಲು ಮಾತನಾಡಿದರು. ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಚಿವ ಮುರುಗೇಶ ನಿರಾಣಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಇದ್ದರು   

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿಯ ಖಾಲಿ ಹುದ್ದೆಗಳ ಭರ್ತಿ, ಇಲ್ಲಿಯ ನೌಕರರಿಗೆ ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯ ಹಾಗೂ ಈ ಭಾಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ರಾಜ್ಯವ್ಯಾಪಿ ಶೇ 8ರ ಮೀಸಲಾತಿ ಸೌಲಭ್ಯ ಸರಿಯಾಗಿ ಸಿಗದಿರುವ ಬಗ್ಗೆ, ಶುಕ್ರವಾರ ಇಲ್ಲಿ ನಡೆದ371 (ಜೆ) ಕಲಂ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಯ ಸಂಪುಟ ಉಪ ಸಮಿತಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.ಆದರೆ, ಈ ಸಮಸ್ಯೆಗಳ ನಿವಾರಣೆಗಾಗಿ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ!

ಸಭೆಯ ನಂತರ ಮಾಧ್ಯಮಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷರೂ ಆಗಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, ‘ಈ ಭಾಗದವರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ದೊರಕಿಸಿಕೊಡಲು ಬದ್ಧ’ ಎಂದರು.

ಹಣ ಖರ್ಚಾದರೂ ಫಲಿತಾಂಶ ಇಲ್ಲ: ಮಹಿಳಾ ಸಬಲೀಕರಣ ಮತ್ತು ಶಿಕ್ಷಣಕ್ಕೆ ಆಧುನಿಕ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಈ ವರೆಗೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ₹2000 ಕೋಟಿಯಷ್ಟು ವೆಚ್ಚ ಮಾಡಿದ್ದೇವೆ. ಆದರೂ, ಎಸ್ಸೆಸ್ಸೆಲ್ಸಿ ಮತ್ತು ಪಿಯು ಫಲಿತಾಂಶದಲ್ಲಿ ಪ್ರಗತಿಯಾಗಿಲ್ಲ. ಆರೋಗ್ಯ ಕ್ಷೇತ್ರಕ್ಕೆ ₹3500 ಕೋಟಿ ಖರ್ಚು ಮಾಡಿದ್ದೇವೆ ಎಂದು ಸಚಿವ ಹೇಳಿದರು.

ADVERTISEMENT

ಹಣ ವಿನಿಯೋಗ ಮತ್ತು ಅದರಿಂದ ಆಗಿರುವ ಬದಲಾವಣೆ ಬಗ್ಗೆ ಆಡಿಟ್‌ ಮಾಡಿಸಬೇಕು ಎಂದು ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷರಾದ ನಂತರ ಶೇ 85ರಷ್ಟು ಆರ್ಥಿಕ ಪ್ರಗತಿಯಾಗಿದೆ ಎಂದರು.

‘ಈ ಭಾಗದ ಖಾಲಿ ಹುದ್ದೆಗಳ ಮಾಹಿತಿ ನನ್ನ ಬಳಿ ಇದೆ. ಸಮಗ್ರ ಮಾಹಿತಿಗೆ ಅಧಿಕಾರಿಗಳಿಗೆ ತಿಂಗಳ ಗಡವು ನೀಡಲಾಗಿದೆ. ಈ ವಿಷಯದಲ್ಲಿ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಶೀಘ್ರವೇ ಸಭೆ ನಡೆಸಿ, ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಸಚಿವರ ಗೈರು: ಈ ಸಂಪುಟ ಉಪ ಸಮಿತಿಯ ಸದಸ್ಯರೂ ಆಗಿರುವ ಸಚಿವರಾದ ಪ್ರಭು ಚವಾಣ್‌, ಆನಂದ ಸಿಂಗ್‌, ಬಿ.ಸಿ. ನಾಗೇಶ್‌ ಗೈರಾಗಿದ್ದರು. ಸಚಿವ ಮುರುಗೇಶ ನಿರಾಣಿ ಮಾತ್ರ ಪಾಲ್ಗೊಂಡಿದ್ದರು.

‘ಬಜೆಟ್‌ ಸಿದ್ಧತೆಗಾಗಿ ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಈ ಸಚಿವರು ಸಭೆಗೆ ಬರಲು ಆಗಿಲ್ಲ‘ ಎಂದು ಶ್ರೀರಾಮುಲು ಸಮಜಾಯಿಷಿ ನೀಡಿದರು.

ಕೆಕೆಆರ್‌ಡಿಬಿ ಅಧ್ಯಕ್ಷರಿಗೇ ಇಲ್ಲ ಸ್ಥಾನ‌

371 (ಜೆ) ಕಲಂ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಯ ಸಂಪುಟ ಉಪ ಸಮಿತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷರಿಗೆ ಸ್ಥಾನವೇ ಇಲ್ಲ!

‘ಇಲ್ಲಿಯ ಸಮಸ್ಯೆಗಳು, ಅನುಷ್ಠಾನದಲ್ಲಿನ ಅಡೆತಡೆಗಳ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ನಮ್ಮನ್ನೂ ಸಮಿತಿಯ ಸದಸ್ಯರನ್ನಾಗಿ ಮಾಡಿಕೊಂಡರೆ ಸಮಿತಿಯ ಸಭೆಯಲ್ಲಿ ಅವುಗಳನ್ನು ಪ್ರಸ್ತಾಪಿಸಿ, ಪರಿಹಾರ ಕಂಡುಕೊಳ್ಳಬಹುದು‘ ಎಂದು ಕೆಕೆಆರ್‌ಡಿಬಿಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಕೆಕೆಆರ್‌ಡಿಬಿಗೆ ಹಿಂದೆ ಸಚಿವರು ಮಾತ್ರ ಅಧ್ಯಕ್ಷರಾಗಲು ಅವಕಾಶ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಿಮಯಕ್ಕೆ ತಿದ್ದುಪಡಿ ತಂದು, ಶಾಸಕರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದರು. ಹೀಗಾಗಿ ಮಂಡಳಿಯ ಅಧ್ಯಕ್ಷರಿಗೆ ಈಗ ಈ ಸಮಿತಿಯಲ್ಲಿ ಸ್ಥಾನ ಸಿಕ್ಕಿಲ್ಲ.

ಕೋಶ ಸ್ಥಳಾಂತ

371 (ಜೆ) ಅಭಿವೃದ್ಧಿ ಕೋಶವನ್ನು ಬೆಂಗಳೂರಿನಿಂದ ಕಲಬುರಗಿಗೆ ಸ್ಥಳಾಂತರಿಸುವ ತೀರ್ಮಾನ ಆಗಿದೆ. ಇದರ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಶೀಘ್ರವೇ ಅದು ಸ್ಥಳಾಂತರವಾಗಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ಪರಿಣತರ ನೇಮಕ

ಕೆಕೆಆರ್‌ಡಿಬಿಗೆ ಪರಿಣತರು– ಜನಪ್ರತಿನಿಧಿಗಳನ್ನು ನೇಮಿಸಿಲ್ಲ, ಇನ್ನೂ ಪೂರ್ಣಪ್ರಮಾಣದ ಆಡಳಿತ ಮಂಡಳಿ ರಚನೆಯಾಗಿಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿ ನೀಡಿದ ಭರವಸೆಯೂ ಹುಸಿಯಾಗಿದೆ ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ‘ಪೂರ್ಣಪ್ರಮಾಣದ ಮಂಡಳಿ ರಚನೆಯಾಗಲಿದೆ. ಇಂದೇ ಆದೇಶ ಹೊರಡಿಸುತ್ತೇವೆ’ ಎಂದು ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.