ADVERTISEMENT

‘₹4 ಕೋಟಿ ಕಿಕ್‌ಬ್ಯಾಕ್‌ ಪಡೆದ ಬಿಎಸ್‌ವೈ’

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST

ಬೆಂಗಳೂರು: ‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆ ನೀಡುವ ಸಂದರ್ಭದಲ್ಲಿ ₹ 4 ಕೋಟಿ ಲಂಚ ಪಡೆದಿರುವುದು 2016ರ ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿ ಬಹಿರಂಗಗೊಂಡಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮತ್ತು ವಿಧಾನ ಪರಿಷತ್‌ ಸದಸ್ಯ ವಿ.ಎಸ್ ಉಗ್ರಪ್ಪ ಆರೋಪಿಸಿದರು. 

ಅಕ್ರಮದಲ್ಲಿ ಭಾಗಿಯಾಗಿರುವ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಮಾಡಿ ಹಣ ಪಡೆದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಬೇಕು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದರು.

‘ನೀರಾವರಿ ನಿಗಮದ ಮೂಲಕ 2007-08ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಗುತ್ತಿಗೆ ನೀಡಲಾಗಿತ್ತು. ಯಡಿಯೂರಪ್ಪ ಆ ಅವಧಿಯಲ್ಲಿ ಈ ನಿಗಮದ ಅಧ್ಯಕ್ಷರೂ ಆಗಿದ್ದರು.
₹ 1,033 ಕೋಟಿಗೆ ಮುರುಡೇಶ್ವರ ಕಾರ್ಪೊರೇಷನ್ ಲಿಮಿಟೆಡ್‌ಗೆ ಗುತ್ತಿಗೆ ನೀಡಿತ್ತು. ಅದರ ಸಹವರ್ತಿ ಆರ್‌ಎನ್‌ಎಸ್‌ಐಎಲ್ ಕಂಪನಿಯಿಂದ ಯಡಿಯೂರಪ್ಪ ₹1 ಕೋಟಿ ಲಂಚ ಪಡೆದಿದ್ದಾರೆ. 2009-10 ಮತ್ತು 2010-11ರಲ್ಲಿ ತಲಾ ₹1 ಕೋಟಿ, 2011-12ರಲ್ಲಿ ₹ 2 ಕೋಟಿ ಲಂಚ ತೆಗೆದುಕೊಂಡಿರುವುದು ಆದಾಯ ತೆರಿಗೆ ಇಲಾಖೆಯ ದಾಖಲೆ ತೋರಿಸುತ್ತದೆ’ ಎಂದು ಆರೋಪಿಸಿದ ಉಗ್ರಪ್ಪ ಈ ಕುರಿತಾದ ದಾಖಲೆಗಳನ್ನು ಪ್ರದರ್ಶಿಸಿದರು.

ADVERTISEMENT

‘ಮುಖ್ಯಮಂತ್ರಿ ಆಗಿದ್ದ ವೇಳೆ ಬಿ.ಎಸ್‌. ಯಡಿಯೂರಪ್ಪ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದರು. ಹಲವು ಅಕ್ರಮಗಳಲ್ಲಿ ಪಾಲ್ಗೊಂಡಿದ್ದ ಆರೋಪವಿದೆ. ಸಿದ್ದರಾಮಯ್ಯ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರ ಎಂದಿದ್ದ ನರೇಂದ್ರ ಮೋದಿ, ಯಡಿಯೂರಪ್ಪ ಅವರದ್ದು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು ಎಂದು ಹೇಳಬೇಕು’ ಎಂದೂ ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.