ADVERTISEMENT

ಕಮಿಷನ್‌ ಆರೋಪ ದುರುದ್ದೇಶದ ಆಂದೋಲನ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 15:39 IST
Last Updated 2 ಅಕ್ಟೋಬರ್ 2022, 15:39 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಬೆಂಗಳೂರು: ಶೇಕಡ 40 ರಷ್ಟು ಕಮಿಷನ್‌ ಆರೋಪವು ಕಾಂಗ್ರೆಸ್‌ ಪಕ್ಷವು ದುರುದ್ದೇಶದಿಂದ ಮಾಡುತ್ತಿರುವ ಆಂದೋಲನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

‘ಕರ್ನಾಟಕದಲ್ಲಿರುವುದು ದೇಶದ ಅತಿಭ್ರಷ್ಟ ಸರ್ಕಾರ’ ಎಂಬ ರಾಹುಲ್‌ ಹೇಳಿಕೆ ಕುರಿತು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಮಹಾತ್ಮ ಗಾಂಧಿ ಜಯಂತಿಯ ಸಂದರ್ಭದಲ್ಲಿ ನಕಲಿ ಗಾಂಧಿಗಳ ಕುರಿತು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಎಲ್ಲರೂ ಜಾಮೀನಿನ ಮೇಲಿದ್ದಾರೆ. ಇಡೀ ಪಕ್ಷವೇ ಜಾಮೀನಿನ ಮೇಲಿದೆ’ ಎಂದರು.

‘ಇಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ. ಶೇಕಡ 40 ರಷ್ಟು ಲಂಚವೂ ಇಲ್ಲ. ಯಾರ ಬಳಿಯಲ್ಲಾದರೂ ದಾಖಲೆ ಇದ್ದರೆ ತನಿಖೆ ನಡೆಸಲು ನಾನು ಸಿದ್ಧ ಇದ್ದೇನೆ’ ಎಂದು ಸವಾಲು ಹಾಕಿದರು.

ADVERTISEMENT

‘ರಾಹುಲ್‌ ಗಾಂಧಿಯವರ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷರು ಬಹಳ ಕಷ್ಟಪಡುತ್ತಿದ್ದಾರೆ. ಅವರ ಮೇಲೆಯೂ ಭ್ರಷ್ಟಾಚಾರದ ಆರೋಪವಿದೆ. ಎರಡು– ಮೂರು ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ಕರ್ನಾಟಕ ಈ ಹಿಂದೆ ಕಾಂಗ್ರೆಸ್‌ನವರಿಗೆ ಎಟಿಎಂ ಆಗಿತ್ತು. ಈಗ ಹಾಗಿಲ್ಲ ಎಂಬುದು ಅವರ ಕೊರಗಿಗೆ ಕಾರಣವಿರಬಹುದು’ ಎಂದರು.

ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ: ಚನ್ನಪಟ್ಟಣದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯದ ಘರ್ಷಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಗಲಾಟೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೆ ಶಿಷ್ಟಾಚಾರ, ಕಾನೂನು ಪಾಲಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.