ADVERTISEMENT

ಪಿಎಫ್‌ಐ 42 ಕಚೇರಿಗಳಿಗೆ ಬೀಗ: ಬೆಂಗಳೂರಿನಲ್ಲಿ ನಾಲ್ವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 20:21 IST
Last Updated 29 ಸೆಪ್ಟೆಂಬರ್ 2022, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಬೆನ್ನಲ್ಲೇ ರಾಜ್ಯದಾದ್ಯಂತ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂಘಟನೆಗಳಿಗೆ ಸೇರಿದ್ದ 42 ಕಚೇರಿಗಳಿಗೆ ಬೀಗ ಹಾಕಿದರು.

ಕಲಬುರಗಿ, ಬೀದರ್, ಕೊಪ್ಪಳ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂಘಟನೆಗಳಿಗೆ ಸೇರಿದ್ದ ಆಸ್ತಿಗಳನ್ನು ಗುರುತಿಸಿ ಶೋಧ ನಡೆಸಿದರು. ತಾಲ್ಲೂಕು ದಂಡಾಧಿಕಾರಿ ಸಮ್ಮುಖದಲ್ಲಿ ಕಚೇರಿಗಳಿಗೆ ಬೀಗಮುದ್ರೆ ಹಾಕಿದರು.

ನಿಷೇಧ ಆದೇಶ ಜಾರಿ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೃಹ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚನೆ ಸಹ ನೀಡಿದ್ದರು.

ADVERTISEMENT

ಕಾರ್ಯಾಚರಣೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್, ‘ಬೆಂಗಳೂರು ಹೊರತುಪಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐನ 38 ಕಚೇರಿಗಳಿಗೆ ಬೀಗ ಹಾಕಲಾಗಿದೆ. ಬೆಂಗಳೂರಿನ ಪೊಲೀಸರು ನಾಲ್ಕು ಕಚೇರಿಗಳಿಗೆ ಬೀಗ ಹಾಕಿ ಜಪ್ತಿ ಮಾಡಿದ್ದಾರೆ’ ಎಂದರು.

ನಾಲ್ವರು ವಶಕ್ಕೆ: ನಿಷೇಧದ ಬಳಿಕವೂ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪಿಎಫ್‌ಐ ಕಚೇರಿ ತೆರೆದಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದರು.

‘ಹಲಸೂರು ಗೇಟ್, ಹೈಗ್ರೌಂಡ್ಸ್ ಹಾಗೂ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿದ್ದ ಪಿಎಫ್‌ಐನ ನಾಲ್ಕು ಕಚೇರಿಗಳಿಗೆ ಬೀಗ ಹಾಕಲಾಗಿದೆ. ಕಚೇರಿಗಳ ಬಳಿ ಭದ್ರತೆಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಬೆಂಗಳೂರು ಕಮಿಷನರೇಟ್ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.