ADVERTISEMENT

4,618 ಕೆರೆಗಳ ಒತ್ತುವರಿ ತೆರವು: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 15:30 IST
Last Updated 25 ಏಪ್ರಿಲ್ 2025, 15:30 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲಾ ಪಂಚಾಯಿತಿಗಳ ವ್ಯಾ‍ಪ್ತಿಯಲ್ಲಿ 9,140 ಕೆರೆಗಳು ಒತ್ತುವರಿಯಾಗಿರುವುದನ್ನು ಗುರುತಿಸಿದ್ದು, ಈ ಪೈಕಿ 4,618 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ, ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 32,648 ಕೆರೆಗಳಿದ್ದು, ಇಲಾಖೆ ಕೈಗೊಂಡಿರುವ ಸಮೀಕ್ಷೆಯಲ್ಲಿ 24,497 ಕೆರೆಗಳನ್ನು ಗುರುತಿಸಲು ಸಾಧ್ಯವಾಗಿದೆ. ಇವುಗಳಲ್ಲಿ 9,140 ಕೆರೆಗಳು ಒತ್ತುವರಿಯಾಗಿವೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ADVERTISEMENT

ಒತ್ತುವರಿ ತೆರವುಗೊಳಿಸಿದ 4,618 ಕೆರೆಗಳ 8,697 ಎಕರೆ ಭೂಮಿಯನ್ನು ಜಿಲ್ಲಾ ಪಂಚಾಯಿತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒತ್ತುವರಿ ಗುರುತಿಸಲ್ಪಟ್ಟಿರುವ ಉಳಿದ 4,522 ಕೆರೆಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ 32,648 ಕೆರೆಗಳ ಪೈಕಿ, ಸಮೀಕ್ಷೆ ಬಾಕಿ ಇರುವ 8,151 ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳ ಒಳಗೆ ಮುಗಿಸಬೇಕೆಂದು ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪ್ರಿಯಾಂಕ್ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಗೆ ಬರುವ 32,648 ಕೆರೆಗಳು ಒಟ್ಟು 3,08,213 ಎಕರೆ ಪ್ರದೇಶವನ್ನು ಹೊಂದಿದೆ. ಇವುಗಳಲ್ಲಿ 2,15,594 ಎಕರೆಗೆ ಸಂಬಂಧಿಸಿದಂತೆ 24,497 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದಿದ್ದಾರೆ.

ರಾಜ್ಯದಲ್ಲಿ ಹಾಸನ ಜಿಲ್ಲೆ ಅತಿ ಹೆಚ್ಚು 6,367, ಶಿವಮೊಗ್ಗ 4,354, ಮೈಸೂರು 2,805, ಕಲಬುರಗಿ 33, ಕೊಪ್ಪಳ 39 ಹಾಗೂ ಬಳ್ಳಾರಿ ಜಿಲ್ಲೆ ಅತಿ ಕಡಿಮೆ 21 ಕೆರೆಗಳನ್ನು ಹೊಂದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಪ್ರಿಯಾಂಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.