ಬೆಂಗಳೂರು: ‘ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಲ್ಲಿ ಏನೆಲ್ಲಾ ಪರಿಹಾರ ಒದಗಿಸಲಾಗಿದೆ ಎಂಬ ಮಾಹಿತಿಯನ್ನು 48 ಗಂಟೆಗಳಲ್ಲಿ ಜನರಿಗೆ ಮಾಹಿತಿ ನೀಡಬೇಕು’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು.
‘ನೆರೆ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಪ್ರವಾಹದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ 3-4 ದಿನಗಳಲ್ಲಿ ನಾನೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಈ ಸರ್ಕಾರ ಏನೆಲ್ಲಾ ಪರಿಹಾರವನ್ನು ಒದಗಿಸಿದೆ ಎಂಬುದನ್ನು ನೋಡುತ್ತೇನೆ ’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
‘ನೆರೆಯಿಂದಾಗಿ 50ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಷ್ಟು ಜಾನುವಾರುಗಳು ಮೃತಪಟ್ಟಿವೆ. ದೊಡ್ಡ ಪ್ರಮಾಣದಲ್ಲಿ ಆಸ್ತಿ, ಬೆಳೆ ನಷ್ಟವಾಗಿದೆ. ಮೂಲಸೌಕರ್ಯಗಳಲ್ಲಿ ರಸ್ತೆಗಳು, ಸೇತುವೆಗಳು ಕುಸಿದಿವೆ. ಮನೆಗಳಿಗೆ ನೆರೆ ನೀರು ನುಗ್ಗಿ ಜನರು ನಿರ್ಗತಿಕರಾಗಿದ್ದಾರೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧ್ಯವಿರುವ ಕಡೆಗಳಿಗೆ ರಸ್ತೆಯ ಮೂಲಕವೇ ತೆರಳಿ ನೆರೆ ಸಂತ್ರಸ್ತರನ್ನು ಭೇಟಿ ಮಾಡುತ್ತೇನೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವರಿಂದ ಮಾಹಿತಿ ಪಡೆಯುತ್ತೇನೆ. ಆಗಿರುವ ನಷ್ಟದ ಬಗ್ಗೆ ವಿವರ ಪಡೆದು ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ನೆರವಿಗೆ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸುತ್ತೇನೆ’ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಕೇಂದ್ರ ಸರ್ಕಾರವು ನೆರೆ ಪೀಡಿತ ಇತರ ರಾಜ್ಯಗಳಿಗೆ ಪರಿಹಾರ ಘೋಷಿಸಿದೆ. ಕರ್ನಾಟಕಕ್ಕೆ ಘೋಷಿಸಿಲ್ಲ. ಈ ಬಗ್ಗೆ ಪ್ರಧಾನಿ ಅವರ ಬಳಿ ಮಾತನಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈ ಬಗ್ಗೆ ರಾಜಕೀಯ ಮಾತನಾಡಲು ಬಯಸುವುದಿಲ್ಲ’ ಎಂದರು.
‘ನೆರೆ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಸರ್ಕಾರ ಇದನ್ನು ತುರ್ತು ಆದ್ಯತೆ ಎಂದು ಪರಿಗಣಿಸಬೇಕು. ಆದರೆ ಖಜಾನೆಯಲ್ಲಿ ಹಣವಿಲ್ಲ ಎಂದು ಶಾಸಕರೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ನೆರೆ ಪೀಡಿತ ಜಿಲ್ಲೆಗಳಿಗೆ ಹಣವಿಲ್ಲ ಎನ್ನುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಂಟಾಗಿರುವ ತೀವ್ರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಬಳಿ ಹಣವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಲ್ಲಾ ಗೊತ್ತಿದೆ: ‘ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ನನಗೆ ಎಲ್ಲಾ ಮಾಹಿತಿಯೂ ಇದೆ. ಭೂಸ್ವಾಧೀನಕ್ಕೆ ರೈತರು ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಕಾಂಗ್ರೆಸ್ ಕೈಯಲ್ಲಿದೆ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು. ಅಲ್ಲಿಯವರೆಗೂ ಕಾಯಬೇಕು’ ಎಂದರು.
‘ಬಿಡದಿ ಟೌನ್‌ಶಿಪ್ ಯೋಜನೆಯ ಬಗ್ಗೆ ಬೇರೆಯವರ ಹೆಸರು ತೆಗೆದು ಚರ್ಚೆ ಮಾಡುವುದು ಬೇಡ. ಮೂರು ತಿಂಗಳ ಹಿಂದೆ ಮಾಧ್ಯಮಗಳು ಬೆಳಗ್ಗೆ ಆರರಿಂದ ರಾತ್ರಿ 10ರವೆಗೂ ನಮ್ಮ ಮನೆ ಬಳಿಯೇ ಇರುತ್ತಿದ್ದವು. ಇದು ಯಾರ ಪ್ರೇರಣೆಯಿಂದ? ಅದರ ಹಿಂದೆ ಯಾರ ಶಕ್ತಿ ಇತ್ತು? ನನಗೆ ಗೊತ್ತಿದೆ. ಅದರ ಬಗ್ಗೆ ಚರ್ಚೆ ಬೇಡ. ನಮ್ಮದು ಸಣ್ಣ ರಾಜಕೀಯ ಪಕ್ಷ. ಇರಲಿ, ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ’ ಎಂದು ದೇವೇಗೌಡ ಅವರು ಹೇಳಿದರು.
‘ಪರಿಹಾರಕ್ಕೆ ಹಣವಿಲ್ಲ ಎನ್ನುವ ಶಾಸಕರು’
‘ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ನೆರೆ ಪೀಡಿತ ಜಿಲ್ಲೆಗಳಿಗೆ ಹಣವಿಲ್ಲ ಎಂದು ಆ ಪಕ್ಷದ (ಕಾಂಗ್ರೆಸ್) ಶಾಸಕರೇ ಹೇಳುತ್ತಿದ್ದಾರೆ’ ಎಂದು ಹೇಳಿದ ದೇವೇಗೌಡರು ‘ನೆರೆ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಸರ್ಕಾರ ಇದನ್ನು ತುರ್ತು ಆದ್ಯತೆ ಎಂದು ಪರಿಗಣಿಸಬೇಕು’ ಎಂದರು. ‘ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಂಟಾಗಿರುವ ತೀವ್ರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬುದು ಆ ಪಕ್ಷದ ಶಾಸಕರ ಅಭಿಪ್ರಾಯ. ನನ್ನದಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅ.12ಕ್ಕೆ ಜೆಡಿಎಸ್ ಸಮಾವೇಶ
‘ಬೆಂಗಳೂರಿನಲ್ಲಿ ಜಿಡಿಎಸ್ ಮಹಿಳಾ ಘಟಕದ ಸಮಾವೇಶವನ್ನು ಅಕ್ಟೋಬರ್ 12ರಂದು ಆಯೋಜಿಸಲಾಗುತ್ತದೆ’ ಎಂದು ಎಚ್.ಡಿ. ದೇವೇಗೌಡ ಹೇಳಿದರು. ‘ನಿಖಿಲ್ ಕುಮಾರಸ್ವಾಮಿ ಅವರು ನಡೆಸಿದ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿದೆ. ಆದರೆ ಅಷ್ಟು ಸಾಲದು. ನಮ್ಮ ಶಕ್ತಿ ಎಷ್ಟು ಇದೆ ಎಂಬುದನ್ನು ತೋರಿಸಬೇಕಿದೆ’ ಎಂದರು. ‘ಮಹಿಳಾ ಘಕಟದ ವತಿಯಿಂದ ಸಮಾವೇಶದಲ್ಲಿ 50 ಸಾವಿರದಿಂದ 60 ಸಾವಿರ ಜನರನ್ನು ಸೇರಿಸಲಾಗುತ್ತದೆ. ಬೆಂಗಳೂರು ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಗೆ ಇದು ನೆರವಾಗಲಿದ್ದು ನಮ್ಮ ಪಕ್ಷವು 50–60 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ’ ಎಂದರು. ‘ಯಾವುದೇ ಚುನಾವಣೆ ಇರಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆತಂಕ ಬೇಡ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ತಮ್ಮನ್ನು ಜೈಲಿಗೆ ಕಳುಹಿಸಲು ದೇವೇಗೌಡ ಅವರ ಕುಟುಂಬ ಪ್ರಯತ್ನಿಸುತ್ತಲೇ ಇದೆ’ ಎಂದು ಡಿ.ಕೆ.ಶಿವಕುಮಾರ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಆ ವ್ಯಕ್ತಿ ಮತ್ತು ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.