ADVERTISEMENT

ಅತಿಥಿ ಉಪನ್ಯಾಸಕರಿಗೆ ₹5 ಲಕ್ಷ ಇಡುಗಂಟು: ಉನ್ನತ ಶಿಕ್ಷಣ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:32 IST
Last Updated 30 ಮೇ 2025, 15:32 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿ 60 ವರ್ಷ ತುಂಬಿದವರಿಗೆ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ₹5 ಲಕ್ಷ ಇಡುಗಂಟು ನೀಡಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ 2024ರಲ್ಲಿ ಅತಿಥಿ ಉಪನ್ಯಾಸಕರು ನಡೆಸಿದ್ದ ಧರಣಿ, ಪಾದಯಾತ್ರೆಯ ನಂತರ ಸರ್ಕಾರ ನಡೆಸಿದ ಮಾತುಕತೆಯಲ್ಲಿ ಇಡುಗಂಟು ನೀಡುವ ಭರವಸೆಯೂ ಸೇರಿತ್ತು. ಅಂದು ನೀಡಿದ್ದ ಭರವಸೆಯಂತೆ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ADVERTISEMENT

ಇಡುಗಂಟು ಯೋಜನೆ ಜನವರಿ 2024ರಿಂದಲೇ ಪೂರ್ವಾನ್ವಯವಾಗಲಿದ್ದು, ಆ ದಿನಾಂಕಕ್ಕೆ ಹಾಗೂ ನಂತರ 60 ವರ್ಷ ಪೂರೈಸಿದ ಎಲ್ಲರಿಗೂ ಸೌಲಭ್ಯ ಸಿಗಲಿದೆ. 2024ರ ಜನವರಿ 1ಕ್ಕಿಂತ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ದಾಟಿದವರು ಇಟುಗಂಟು ಸೌಲಭ್ಯ ಪಡೆಯಬಹುದು.

ಆಯಾ ಕಾಲೇಜುಗಳ ಪ್ರಾಂಶುಪಾಲರು ಸೇವಾ ದೃಢೀಕರಣ ಪತ್ರ ನೀಡಬೇಕು. ಅತಿಥಿ ಉಪನ್ಯಾಸಕರು ಸಲ್ಲಿಸಿದ ಸೇವಾ ವರ್ಷಗಳ ಆಧಾರದಲ್ಲಿ ಪ್ರತಿ ವರ್ಷಕ್ಕೆ ₹50 ಸಾವಿರದಂತೆ ಗರಿಷ್ಠ 10 ವರ್ಷಗಳ ಸೇವೆಯನ್ನು ಪರಿಗಣಿಸಲಾಗುವುದು. ಆಯಾ ಶೈಕ್ಷಣಿಕ ವರ್ಷದಲ್ಲಿ 240 ದಿನಗಳು ಕೆಲಸ ಮಾಡಿರಬೇಕು. 8 ತಿಂಗಳಿಗಿಂತ ಕಡಿಮೆ ಅವಧಿ ಕೆಲಸ ಮಾಡಿದ್ದರೆ ಅದನ್ನು ಭಾಗಶಃ ವರ್ಷ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಕೆಲಸದ ಅವಧಿಯಲ್ಲೇ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಮೊತ್ತವನ್ನು ಹಸ್ತಾಂತರಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.