
ಬೆಂಗಳೂರು: ನಗರದ ವಾಣಿಜ್ಯ ಕೇಂದ್ರಗಳಲ್ಲಿ 15 ದಿನಗಳ ರಹಸ್ಯ ಕಾರ್ಯಾಚರಣೆ ನಡೆಸಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ₹500 ಕೋಟಿಗೂ ಹೆಚ್ಚು ಮೊತ್ತದ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ (ದಕ್ಷಿಣ ವಲಯ) ಅಧಿಕಾರಿಗಳು ನಗರದ ಬಿವಿಕೆ ಅಯ್ಯಂಗಾರ್ ರಸ್ತೆ, ಅವೆನ್ಯೂ ರಸ್ತೆ, ಜೆ.ಸಿ.ರಸ್ತೆ, ಎಸ್‌ಪಿ ರಸ್ತೆ, ಚಿಕ್ಕಪೇಟೆ ಪ್ರದೇಶಗಳಲ್ಲಿ ಅಂಗಡಿಗಳಲ್ಲಿ ಗಸ್ತಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
‘ಬಿವಿಕೆ ಅಯ್ಯಂಗಾರ್ ರಸ್ತೆ, ಎಸ್‌ಪಿ ರಸ್ತೆ, ಚಿಕ್ಕಪೇಟೆ ಪ್ರದೇಶದಲ್ಲಿ ಪ್ರತಿದಿನ ಅಪಾರ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು, ವಿದ್ಯುತ್ ತಂತಿ, ಸ್ವಿಚ್, ಬಲ್ಬ್‌ಗಳು, ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಅವುಗಳಿಗೆ ಜಿಎಸ್‌ಟಿ ಬಿಲ್ ನೀಡುತ್ತಿಲ್ಲ. ಬದಲಿಗೆ ನಕಲಿ ಬಿಲ್ ನೀಡುತ್ತಿದ್ದಾರೆ. ಈ ಮೂಲಕ ಜಿಎಸ್‌ಟಿ ವಂಚಿಸುತ್ತಿದ್ದಾರೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಈ ಸರಕುಗಳನ್ನು ದೆಹಲಿ ಮತ್ತು ಸುತ್ತಮುತ್ತಲಿನ ವ್ಯಾಪಾರಿಗಳು ಚೀನಾದಿಂದ ಆಮದು ಮಾಡಿಕೊಳ್ಳುತ್ತಾರೆ. ಅವುಗಳನ್ನು ಜಿಎಸ್‌ಟಿ ಇಲ್ಲದೆಯೇ ಇಲ್ಲಿಗೆ ಸರಬರಾಜು ಮಾಡಿದ್ದಾರೆ. ದೆಹಲಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ತಯಾರಿಸಲಾದ ಸರಕುಗಳನ್ನೂ ಜಿಎಸ್‌ಟಿ ಇಲ್ಲದೆ ಪೂರೈಕೆ ಮಾಡಿದ್ದಾರೆ. ಇ–ವೇ ಬಿಲ್ ಇಲ್ಲದೆ ಹಲವು ರಾಜ್ಯಗಳನ್ನು ದಾಟಿಕೊಂಡು ಈ ಸರಕು ಬೆಂಗಳೂರಿಗೆ ಬಂದಿವೆ ಎಂಬುದು ಪತ್ತೆಯಾಗಿದೆ’ ಎಂದರು.
‘15 ದಿನಗಳಲ್ಲಿ ಅಂತಹ ಸರಕನ್ನು ಹೊತ್ತ ಸಾವಿರಾರು ಟ್ರಕ್–ಮಿನಿಟ್ರಕ್‌ಗಳು ಈ ಪ್ರದೇಶಕ್ಕೆ ಬಂದಿವೆ. ಆ ಪೈಕಿ ಹಲವು ಟ್ರಕ್‌ಗಳಲ್ಲಿನ ಸರಕುಗಳಿಗೆ ಜಿಎಸ್‌ಟಿ ಬಿಲ್‌ಗಳು ಇರಲಿಲ್ಲ. ಆ ಸರಕುಗಳ ಜಿಎಸ್‌ಟಿ ಮೊತ್ತವೇ ₹500 ಕೋಟಿ ದಾಟುತ್ತದೆ’ ಎಂದು ಮಾಹಿತಿ ನೀಡಿದರು.
1,000 ಚೀಲ ಪಾನ್ ಮಸಾಲ ಅಕ್ರಮ ಸಾಗಣೆ:
‘ಯಶವಂತಪುರ ರೈಲು ನಿಲ್ದಾಣದಲ್ಲಿ 15 ದಿನ ಕಾರ್ಯಾಚರಣೆ ನಡೆಸಲಾಗಿದ್ದು, ನೂರಾರು ಟ್ರಕ್‌ಗಳು ಜಿಎಸ್‌ಟಿ ಬಿಲ್ ಇಲ್ಲದ ಸರಕುಗಳನ್ನು ಸಾಗಿಸಿವೆ. ಈ ವೇಳೆ ಜಿಎಸ್‌ಟಿ ಇಲ್ಲದ 1,000 ಚೀಲಗಳಷ್ಟು ಪಾನ್ ಮಸಾಲವನ್ನು ದೆಹಲಿಯಿಂದ ಯಶವಂತಪುರಕ್ಕೆ ರೈಲಿನ ಮೂಲಕ ಕಳುಹಿಸಿರುವುದು ಪತ್ತೆಯಾಗಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.