ADVERTISEMENT

24 ಗಂಟೆಯೊಳಗೆ ಆರೋಪ ಸಾಬೀತು ಮಾಡಲಿ: ಯಡಿಯೂರಪ್ಪ ಸವಾಲು

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 7:35 IST
Last Updated 5 ಜನವರಿ 2018, 7:35 IST
24 ಗಂಟೆಯೊಳಗೆ ಆರೋಪ ಸಾಬೀತು ಮಾಡಲಿ: ಯಡಿಯೂರಪ್ಪ ಸವಾಲು
24 ಗಂಟೆಯೊಳಗೆ ಆರೋಪ ಸಾಬೀತು ಮಾಡಲಿ: ಯಡಿಯೂರಪ್ಪ ಸವಾಲು   

ಬಳ್ಳಾರಿ: ಬಿಜೆಪಿ ಹಾಗೂ ಪಿಎಫ್‌ಐ ಜತೆ ಗುಪ್ತ ಸಂಬಂಧ ಏರ್ಪಟ್ಟಿದೆ ಎಂದು ಗೃಹ ಸಚಿವ ಎ.ರಾಮಲಿಂಗಾರೆಡ್ಡಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. 24 ಗಂಟೆಯೊಳಗೆ ಅವರು ಅದನ್ನು ಸಾಬೀತು ಮಾಡಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ್ ರಾವ್‌ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಮೂವರು ಮುಖಂಡರ ಕೈವಾಡವಿದೆ ಎಂಬುದು ಸುಳ್ಳು ಎಂದು‌ ಪ್ರತಿಪಾದಿಸಿದರು.

[Related]

ADVERTISEMENT

ರಾಜ್ಯ ಸರ್ಕಾರ ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸುವುದಿಲ್ಲವೆಂಬ ಕಾರಣಕ್ಕೆ ರಾಜ್ಯದ ಸಂಸದರು‌ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಕೇಂದ್ರವನ್ನು ಆಗ್ರಹಿಸಿದ್ದಾರೆ ಎಂದು ಹೇಳಿದರು.

ಮಹಾದಾಯಿ ವಿವಾದದ ಕುರಿತು ಸಿಎಂ ಸಿದ್ದರಾಮಯ್ಯ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಕುಡಿಯುವ ಸಲುವಾಗಿ ನೀರು ಕೊಡಲು ಸಿದ್ದ ಎಂಬ ಗೋವಾ ಮುಖ್ಯಮಂತ್ರಿ ಪರ‍್ರೀಕರ್‌ ಹೇಳಿಕೆಯನ್ನು ವಿರೋಧಿಸಿದ ಅಲ್ಲಿನ ಕಾಂಗ್ರೆಸ್ ಮುಖಂಡರ ಬಾಯಿ ಮುಚ್ಚಿಸದೇ ಮುಖ್ಯಮಂತ್ರಿ ಸುಮ್ಮನಿದ್ದುದು ಏಕೆ ಎಂದು ಪ್ರಶ್ನಿಸಿದರು.

ವಿವಾದಗಳಿರುವ ರಾಜ್ಯದ 100 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆಗೆ ಮುನ್ನ ಮರು ಸಮೀಕ್ಷೆ ನಡೆಯಲಿದೆ. ಕೂಡ್ಲಿಗಿ ಪಕ್ಷೇತರ ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಯಾವ ಪಕ್ಷವನ್ನಾದರೂ ಸೇರಲು ಸ್ವತಂತ್ರರು ಎಂದರು.

28 ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ. ಜನವರಿ 10ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.