ADVERTISEMENT

ನಿವೃತ್ತಿಗೂ ಮೊದಲೇ ಶೇ 90ರಷ್ಟು ಪೌರ ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಸಫಾಯಿ ಕರ್ಮಚಾರಿ ಆಯೋಗದ ಕ್ಯಾಲೆಂಡರ್‌ನ್ನು ಸಚಿವ ಎಚ್. ಆಂಜನೇಯ ಬಿಡುಗಡೆ ಮಾಡಿದರು. ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್, ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ. ಶಂಕರ್ ಇದ್ದರು – ಪ್ರಜಾವಾಣಿ ಚಿತ್ರ
ಸಫಾಯಿ ಕರ್ಮಚಾರಿ ಆಯೋಗದ ಕ್ಯಾಲೆಂಡರ್‌ನ್ನು ಸಚಿವ ಎಚ್. ಆಂಜನೇಯ ಬಿಡುಗಡೆ ಮಾಡಿದರು. ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್, ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ. ಶಂಕರ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಪೌರಕಾರ್ಮಿಕರಲ್ಲಿ ಅನಾರೋಗ್ಯ ಹೆಚ್ಚುತ್ತಿದ್ದು, ಶೇ 90ರಷ್ಟು ಕಾರ್ಮಿಕರು ನಿವೃತ್ತಿಗೆ ಮೊದಲೇ ಸಾವಪ್ಪುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ತನ್ನ ಆರೋಗ್ಯ ಬಲಿಕೊಟ್ಟು ಸಮಾಜದ ಆರೋಗ್ಯ ಕಾಪಾಡುವ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಿದ್ದಾರೆ ಎಂದು ಹೇಳಿದರು.

ದುರ್ವಾಸನೆ ನಡುವೆ ಕೆಲಸ ಮಾಡಬೇಕಿದ್ದು, ಅನಿವಾರ್ಯವಾಗಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಇದರಿಂದಾಗಿ ರೋಗಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರಂತ ಎಂದರು.

ADVERTISEMENT

ಪೌರ ಕಾರ್ಮಿಕರ ಆರೋಗ್ಯ ಸುಧಾರಣೆ ಮತ್ತು ಅವರ ಆರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಸದ್ಯದಲ್ಲೆ ಮುಖ್ಯಮಂತ್ರಿ ಮೂಲಕ ಕಚೇರಿ ಉದ್ಘಾಟನೆ ಮಾಡಿಸಲಾಗುವುದು ಎಂದು ಹೇಳಿದರು.

ಹೊರಗುತ್ತಿಗೆ ಕಾರ್ಮಿಕರ ನೌಕರಿಗೆ ಧಕ್ಕೆ ಇಲ್ಲ
700 ಜನರಿಗೆ ಒಬ್ಬ ಪೌರ ಕಾರ್ಮಿಕ ಎಂಬ ಹೊಸ ಮಾನದಂಡದಿಂದ ಶೇ 25ರಷ್ಟು ಹೊರ ಗುತ್ತಿಗೆ ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಆದರೆ, ಮಾನದಂಡ ಪರಿಷ್ಕರಣೆಗೆ ಸರ್ಕಾರ ಒಪ್ಪಿಕೊಂಡಿದೆ ಎಂದು ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಸ್ಪಷ್ಟಪಡಿಸಿದರು.

ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ(ಬಿಬಿಎಂಪಿ) 33,000 ಮತ್ತು ಇತರ ಜಿಲ್ಲೆಗಳಲ್ಲಿ 32,000 ಪೌರ ಕಾರ್ಮಿಕರಿದ್ದಾರೆ. ಯಾರನ್ನೂ ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ ಭರವಸೆ ದೊರೆತಿದೆ. ಕಾರ್ಮಿಕರಿಗೆ ಆತಂಕ ಬೇಡ ಎಂದರು.

ಕೋಲಾರ, ಬೀದರ್, ಕಲಬುರ್ಗಿ, ರಾಯಚೂರು, ಹಾವೇರಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಸ್ತೆ ಮತ್ತು ಚರಂಡಿಯ ಮೇಲೆ ಶೌಚ ನೀರು ಹರಿಯುತ್ತಿರುವ ಸಾವಿರಾರು ಪ್ರಕರಣಗಳಿವೆ. ಅದನ್ನು ತಡೆಗಟ್ಟಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಅಲ್ಲಿನ ಪಾಲಿಕೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

‘ಅಲೆಮಾರಿ’ಗಳ ಜೀವನೋಪಾಯಕ್ಕೆ ಸರ್ಕಾರದ ಹೊಸ ಯೋಜನೆ
ಬೆಂಗಳೂರು:
ಅಲೆಮಾರಿ ಸಮುದಾಯದವರ ಜೀವನೋಪಾಯಕ್ಕೆ ನೆರವು ಕಲ್ಪಿಸಲು ₹25 ಕೋಟಿ ವೆಚ್ಚದಲ್ಲಿ ಹೊಸ ಯೋಜನೆಯೊಂದನ್ನು ಸರ್ಕಾರ ಜಾರಿಗೆ ತರಲಿದೆ.

ಪರಿಶಿಷ್ಟ ಜಾತಿಗೆ ಸೇರಿದ್ದರೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ದಕ್ಕಲಿಗ, ಸುಡುಗಾಡು ಸಿದ್ಧ, ಬುಡ್ಗ ಜಂಗಮ, ಶಿಳ್ಳೇಕ್ಯಾತ ಸೇರಿದಂತೆ 40 ಉಪ ಜಾತಿಗಳ ಜನರಿಗೆ ವಿಶೇಷ ನೆರವು ನೀಡುವ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ತಿಳಿಸಿದರು.

ಸ್ವ ಉದ್ಯೋಗಕ್ಕಾಗಿ ಕಾರು ಖರೀದಿ, ವ್ಯಾಪಾರ, ಉದ್ದಿಮೆ ಆರಂಭಿಸಲು ₹10 ಲಕ್ಷದವರೆಗೆ ನೇರ ಸಾಲ, ಕೃಷಿ ಮಾಡಲು ಮುಂದಾದರೆ ಗರಿಷ್ಠ ₹ 15 ಲಕ್ಷ ವೆಚ್ಚದಲ್ಲಿ ಎರಡು ಎಕರೆ ಜಮೀನು ಖರೀದಿಗೆ ನೆರವು ನೀಡಲಾಗುವುದು ಎಂದು ಹೇಳಿದರು.

‘ಜಾತಿ ಸಮೀಕ್ಷೆ ಕಾಂಗ್ರೆಸ್‌ಗೆ ಮುನ್ನುಡಿ ಬರೆಯಲಿದೆ’
ಬೆಂಗಳೂರು: ಜಾತಿ ಸಮೀಕ್ಷೆ ರಾಜ್ಯ ಕಾಂಗ್ರೆಸ್‌ಗೆ ಹೊಸ ಮುನ್ನುಡಿ ಬರೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.

ಪಕ್ಷಕ್ಕೆ ಹಿನ್ನೆಡೆಯಾಗಲಿದೆ ಎಂಬ ಕಾರಣಕ್ಕೆ ಜಾತಿ ಸಮೀಕ್ಷೆ ಪೂರ್ಣಗೊಳಿಸಿಲ್ಲ ಎಂಬುದು ಸುಳ್ಳು. ತಾಂತ್ರಿಕ ಕಾರಣಗಳಿಂದ ವಿಳಂಬ ಆಗುತ್ತಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಹೇಳುತ್ತಿದೆ. ಆಯೋಗದ ಜೊತೆ ಮುಖ್ಯಮಂತ್ರಿಯವರು ಮಾತನಾಡಿ ಆದಷ್ಟು ಬೇಗ ವರದಿ ಪಡೆಯಲಿದ್ದಾರೆ ಎಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಎಲ್ಲಾ ಸಮುದಾಯದ ಬಡವರಿಗೂ ಸಮಾನ ಆವಕಾಶ ಸಿಗಬೇಕು ಎಂಬ ಕಾರಣದಿಂದ ದೇಶದಲ್ಲೇ ಮಾದರಿಯಾದ ಸಮೀಕ್ಷೆಯನ್ನು ಸರ್ಕಾರ ಮಾಡಿಸಿದೆ. ಹೀಗಾಗಿಯೇ ಹೊರ ರಾಜ್ಯಗಳ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿಕೊಂಡು ಹೋಗಿದ್ದಾರೆ ಎಂದರು.

‘ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಿಂದಲೇ ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದೂ ಆಂಜನೇಯ ಸ್ಪಷ್ಟಪಡಿಸಿದರು.

‘ಬೇರೆ ಜಿಲ್ಲೆಗಳ ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಆದರೆ, ರಾಜಕೀಯ ಜನ್ಮ ನೀಡಿದ ಕ್ಷೇತ್ರವನ್ನು ಮರೆಯಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಹೇಳಿದರು.

ಮಂಗಳೂರಿನ ಕೋಮು ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಣಗಳ ಮೇಲೆ ಯಾರೂ ರಾಜಕೀಯ ಮಾಡಬಾರದು. ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.