ADVERTISEMENT

ಶುಲ್ಕ ಹೆಚ್ಚಳಕ್ಕೆ ಆಡಳಿತ ಮಂಡಳಿಗಳ ಒತ್ತಡ

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ: ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಶುಲ್ಕ ಹೆಚ್ಚಳಕ್ಕೆ ಆಡಳಿತ ಮಂಡಳಿಗಳ ಒತ್ತಡ
ಶುಲ್ಕ ಹೆಚ್ಚಳಕ್ಕೆ ಆಡಳಿತ ಮಂಡಳಿಗಳ ಒತ್ತಡ   

ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕ ಹೆಚ್ಚಿಸುವಂತೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮನವಿ ಮಾಡಿದ್ದು, ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಕಾಮೆಡ್–ಕೆ, ಅಲ್ಪಸಂಖ್ಯಾತ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಜೊತೆಗೆ ಶನಿವಾರ ಮಾತುಕತೆಯ ಬಳಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಶಿಕ್ಷಣ ಸಂಸ್ಥೆಗಳ ಜತೆಗೆ ಕಳೆದ 10 ವರ್ಷಗಳಿಂದ ನಡೆದುಕೊಂಡು ಬಂದ ಸಹಮತದ ಒಪ್ಪಂದ ಈ ವರ್ಷವೂ ಮುಂದುವರಿಯುತ್ತದೆ. ದೇಶದಲ್ಲಿ ಕರ್ನಾಟಕದಲ್ಲಿಯೇ ವೈದ್ಯಕೀಯ ಕೋರ್ಸ್‌ ಶುಲ್ಕ ಅತ್ಯಂತ ಕಡಿಮೆ ಇದೆ. ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ದುಬಾರಿ ಇದೆ ಎಂದು ಶಿಕ್ಷಣ ಸಂಸ್ಥೆಗಳು ಹೇಳಿವೆ. ಅಧಿಕ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಲು ಸಂಸ್ಥೆಗಳು ಮನವಿ ಮಾಡಿವೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಮೊದಲು ವಿದ್ಯಾರ್ಥಿಗಳ ಹಿತ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ADVERTISEMENT

ಸ್ನಾತಕೋತ್ತರ ನೀಟ್‌

ಅಖಿಲಭಾರತ ಮಟ್ಟದ ಪಿಜಿ ನೀಟ್‌ ಭಾನುವಾರ ನಡೆಯಲಿದೆ. ಇದೇ ತಿಂಗಳ ಕೊನೆಗೆ ಫಲಿತಾಂಶ ಪ್ರಕಟವಾಗುತ್ತದೆ. ಮಾರ್ಚ್‌ನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಮೇ ಕೊನೆಗೆ ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಶರಣಪ್ರಕಾಶ ಪಾಟೀಲ ತಿಳಿಸಿದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಕುರಿತು ರಾಜ್ಯ ಸರ್ಕಾರದಿಂದ ಅಭಿಪ್ರಾಯ ಕೇಳಿಲ್ಲ. ಆದರೆ, ರಾಜ್ಯ ಸರ್ಕಾರವೇ ಒಂದಷ್ಟು ಅಂಶಗಳ ಬಗ್ಗೆ ಅಭಿಪ್ರಾಯಗಳನ್ನು ಸೇರಿಸಿ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.