ADVERTISEMENT

‘ಹೈಕೋರ್ಟ್‌ನಲ್ಲಿ ನ್ಯಾಯ ಸಿಗಲಾರದು’

ಬಿ.ಎಸ್.ಷಣ್ಮುಖಪ್ಪ
Published 6 ಜನವರಿ 2018, 19:43 IST
Last Updated 6 ಜನವರಿ 2018, 19:43 IST
ರಾಘವೇಶ್ವರ ಸ್ವಾಮೀಜಿ
ರಾಘವೇಶ್ವರ ಸ್ವಾಮೀಜಿ   

ಬೆಂಗಳೂರು: ರಾಘವೇಶ್ವರ ಶ್ರೀ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಯಾವುದೇ ಅರ್ಜಿಗಳು ದಾಖಲಾದರೂ  ನ್ಯಾಯಮೂರ್ತಿಗಳು ಏಕಾಏಕಿ ವಿಚಾರಣೆಯಿಂದ ಹಿಂದೆ ಸರಿಯುತ್ತಾರೆ. ಹೀಗಾಗಿ ಹೈಕೋರ್ಟ್‌ಗೆ ಹೋದರೂ  ನ್ಯಾಯ ಸಿಗುವ ಭರವಸೆ ಇಲ್ಲ. ಅದಕ್ಕೆಂದೇ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದೇನೆ ...!

ಸ್ವಾಮೀಜಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕ್ರಿಮಿನಲ್‌ ರಿಟ್‌ ಅರ್ಜಿ ದಾಖಲಿಸಿರುವ 26 ವರ್ಷದ ಸಂತ್ರಸ್ತೆ, ಅರ್ಜಿಯಲ್ಲಿ ವಿವರಿಸಿರುವ ಅಂಶವಿದು.

‘ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಗಿರಿನಗರ ಪೊಲೀಸ್‌ ಠಾಣೆಗೆ ದೂರು ಕೊಟ್ಟು ಎರಡು ವರ್ಷವಾಗಿದೆ. ಆದರೂ ಸಿಐಡಿ ತನಿಖೆ ಪೂರ್ಣಗೊಳಿಸಿಲ್ಲ ಅಥವಾ ತನಿಖೆಯ ಪ್ರಗತಿಗೆ ಸಂಬಂಧಿಸಿದಂತೆ ನನಗೆ ಕಿಂಚಿತ್ತೂ ಮಾಹಿತಿ ನೀಡುತ್ತಿಲ್ಲ. ಕರ್ನಾಟಕದ ಪೊಲೀಸರು ಸ್ವಾಮೀಜಿ ಮತ್ತು ಅವರ ಕೂಟದ ಪ್ರಭಾವಕ್ಕೆ ಒಳಗಾಗಿದ್ದಾರೆ’ ಎಂದು ಸಂತ್ರಸ್ತೆ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಸ್ವಾಮೀಜಿ ಮತ್ತು ಅವರ ಅನುಯಾಯಿಗಳು ರಾಜಕೀಯ ನಂಟು ಹೊಂದಿದ ಬಲಶಾಲಿಗಳಾಗಿದ್ದಾರೆ. ಇದರಿಂದಾಗಿ ಸಂವಿಧಾನ ನನಗೆ ಕೊಡ
ಮಾಡಿರುವ 14 ಮತ್ತು 21ನೇ ವಿಧಿಗೆ ಚ್ಯುತಿ ಉಂಟಾಗಿದೆ’ ಎಂದು ಹೇಳಿದ್ದಾರೆ.

‘ನಾನು ದೂರು ನೀಡಿದ ಮೇಲೆ ನನಗೆ ಎರಡು ಬೆರಳಿನ ಪರೀಕ್ಷೆ ಮಾಡಲಾಯಿತು. ನಾನು ಸ್ವಾಮೀಜಿ ಮೊಬೈಲ್‌ ಫೋನುಗಳ ವಿವರ ಪರೀಕ್ಷಿಸುವಂತೆ ಮೌಖಿಕವಾಗಿ ಕೇಳಿಕೊಂಡೆ. ಆದರೆ, ಇಲ್ಲಿವರೆಗೂ ಮಾಡಿಲ್ಲ. ಹೇಳಿಕೆಯನ್ನೂ ದಾಖಲಿಸಿಕೊಂಡಿಲ್ಲ’ ಎಂದೂ ಸಂತ್ರಸ್ತೆ ಅಲವತ್ತುಕೊಂಡಿದ್ದಾರೆ.

‘ಸ್ವಾಮೀಜಿ ವಿರುದ್ಧ ರಾಮಕಥಾ ಗಾಯಕಿ ಅತ್ಯಾಚಾರದ ದೂರು ನೀಡಿದ್ದರು. ಆದರೆ ಸಿಐಡಿ ತನಿಖೆಯಲ್ಲಿ ದೋಷವಿದೆ ಎಂಬ ಆಧಾರದಲ್ಲಿ ಬೆಂಗಳೂರು ಸೆಷನ್ಸ್‌ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು.  ಸ್ವಾಮೀಜಿ ತಮ್ಮ ಪರ ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ವಿವರಿಸಿದ್ದಾರೆ.

‘ಸ್ವಾಮೀಜಿ ಕಾಮದಾಹಕ್ಕೆ ಮಠದ ಅಧೀನದಲ್ಲಿರುವ ಶಾಲೆಯ ವಿದ್ಯಾರ್ಥಿಗಳು ಮತ್ತು ಮುಗ್ಧ ಭಕ್ತರೇ ಬಲಿಪಶುಗಳು. ಅವರ ವಿರುದ್ಧ ಅತ್ಯಾಚಾರದ ಅನೇಕ ಪ್ರಕರಣಗಳಿವೆ. ಆದರೆ, ದೂರು ದಾಖಲಿಸಲು ಯಾರೂ ಧೈರ್ಯ ಮಾಡುತ್ತಿಲ್ಲ’ ಎಂದು ಸಂತ್ರಸ್ತೆ ದೂರಿದ್ದಾರೆ.

ಅರ್ಜಿಯ ಪ್ರಾರ್ಥನೆ ಏನು?: ‘ಈಗಿನ ಸಿಐಡಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶಿಸಬೇಕು. ಸಿಬಿಐ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಇಲ್ಲವೇ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಐಡಿ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂಬುದು ಸಂತ್ರಸ್ತೆಯ ಕೋರಿಕೆ.

ಪ್ರತಿವಾದಿಗಳಾಗಿರುವ ಸ್ವಾಮೀಜಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗಿರಿನಗರ ಪೊಲೀಸ್‌ ಠಾಣೆ ಅಧಿಕಾರಿ, ಸಿಐಡಿ ಮತ್ತು ಸಿಬಿಐಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ಆರು ವಾರಗಳಲ್ಲಿ ಉತ್ತರ ನೀಡುವಂತೆ ನಿರ್ದೇಶಿಸಿದೆ. ಅರ್ಜಿದಾರರ ಪರ ಆರ್. ಬಸಂತ್, ರಾಜೇಶ್ ಮಹಾಲೆ ಹಾಗೂ ಕೃತಿನ್ ಆರ್.ಜೋಷಿ ಹಾಜರಾಗಿದ್ದರು.

12ಕ್ಕೆ ಮೇಲ್ಮನವಿ ವಿಚಾರಣೆ
‘ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಾಮೀಜಿ ನನ್ನ ಮೇಲೆ 154 ಬಾರಿ ಅತ್ಯಾಚಾರ ನಡೆಸಿದ್ದಾರೆ’ ಎಂದು ರಾಮಕಥಾ ಗಾಯಕಿ ಮಾಡಿದ್ದ ಆರೋಪ ಪ್ರಕರಣದಲ್ಲಿ ಸ್ವಾಮೀಜಿ ಖುಲಾಸೆಯಾಗಿದ್ದು, ಸೆಷನ್ಸ್‌ ನ್ಯಾಯಾಲಯದ ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಏಕಸದಸ್ಯ ನ್ಯಾಯಪೀಠದ ಮುಂದಿರುವ ಈ ಮೇಲ್ಮನವಿ ವಿಚಾರಣೆ ಇದೇ 12ಕ್ಕೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.