ADVERTISEMENT

ಪುಸ್ತಕ ಓದಿಸಲೊಂದು ‘ಪಯಣ’

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಜಾರಿ

ಎಂ.ಮಹೇಶ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪುಸ್ತಕ ಓದಿನ ‘ಪಯಣ’ ಆರಂಭವಾಗಿದೆ.

ವಿದ್ಯಾರ್ಥಿಗಳಲ್ಲಿ, ಪಠ್ಯದೊಂದಿಗೆ ಪಠ್ಯೇತರ ಪುಸ್ತಕಗಳನ್ನೂ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ಅಧ್ಯಯನ ನಿರತ ವಿದ್ಯಾರ್ಥಿಗಳು ವಾರಕ್ಕೊಂದು ಹೊಸ ಪುಸ್ತಕ ಓದಿಕೊಂಡು ಬರುವುದು ಕಡ್ಡಾಯ.

ಕನ್ನಡ ಸ್ನಾತಕೋತ್ತರ ಪದವೀಧರರು ಪಠ್ಯವನ್ನಷ್ಟೇ ಓದಿಕೊಂಡರೆ ಸಾಲದು. ಅವರಿಗೆ ಪ್ರಚಲಿತ ವಿದ್ಯಮಾನ, ಜಗತ್ತಿನ ಆಗುಹೋಗುಗಳ ಅರಿವೂ ಇರಬೇಕಾಗುತ್ತದೆ. ಉನ್ನತ ಅಧ್ಯಯನ ಹಾಗೂ ಉದ್ಯೋಗ ಪಡೆಯುವ ಮುನ್ನ ಅವರು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ವಾರಕ್ಕೊಂದು, ಸಾಹಿತ್ಯ ಹಾಗೂ ಸಾಹಿತ್ಯೇತರ ಕೃತಿಯನ್ನು ಓದಬೇಕು. ಅದರ ಬಗ್ಗೆ ಕನಿಷ್ಠ ಮೂರು ಪುಟಗಳಷ್ಟು ಟಿಪ್ಪಣಿ ಸಿದ್ಧಪಡಿಸಿಕೊಂಡು ತರಗತಿಗೆ ಬರಬೇಕು ಹಾಗೂ ಈ ಬಗ್ಗೆ ತರಗತಿಯಲ್ಲಿ ಚರ್ಚಿಸಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಈ ಚಟುವಟಿಕೆಯು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ನೆರವಾಗುತ್ತದೆ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕ ಗಜಾನನ ನಾಯ್ಕ.

ADVERTISEMENT

ಓದಿನ ಲಾಭದ ಮನವರಿಕೆ
‘ಸ್ನಾತಕೋತ್ತರ ಪದವಿಯ ಮೊದಲ ವರ್ಷದಲ್ಲಿ 43, ಎರಡನೇ ವರ್ಷದಲ್ಲಿ 47 ವಿದ್ಯಾರ್ಥಿಗಳಿದ್ದಾರೆ. ಪಿಎಚ್‌.ಡಿ ಮಾಡುತ್ತಿರುವ 100 ಮಂದಿ ಅಭ್ಯರ್ಥಿಗಳಿದ್ದಾರೆ. ಅವರೆಲ್ಲರೂ ಈ ‘ಪಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶೇ 90ರಷ್ಟು ಮಂದಿ ಕತೆ, ಕಾದಂಬರಿ, ಅನುವಾದ, ಆತ್ಮಕತೆ ಹಾಗೂ ಅವರಿಗೆ ಇಷ್ಟವಾದ ವಿಷಯಗಳನ್ನು ಓದಿಕೊಂಡು ಬರುತ್ತಿದ್ದಾರೆ. ಓದಿಕೊಂಡು ಬಾರದವರ ವಿರುದ್ಧ ಕ್ರಮ ಕೈಗೊಳ್ಳುವುದು ಎಂದೇನೂ ಇಲ್ಲ. ಅಂಥವರಿಗೆ ಸಲಹೆ ನೀಡುತ್ತೇವೆ. ಓದಿನಿಂದ ಆಗುವ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಅವರು.

‘2010ರಲ್ಲಿ ನಾನು ಇಲ್ಲಿಗೆ ಬಂದಾಗ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಲ್ಲಿ ಓದಿನ ಕೊರತೆ ಕಂಡುಬಂದಿತು. ಅದರಲ್ಲೂ ಗ್ರಾಮೀಣ ಪ್ರದೇಶದವರಲ್ಲಿ ಪಠ್ಯೇತರ ಪುಸ್ತಕಗಳನ್ನು ಓದುವವರು ತೀರಾ ಕಡಿಮೆ ಇದ್ದರು. ಹೀಗಾಗಿ, ಅವರಲ್ಲಿ ಸಾಹಿತ್ಯದ ಓದಿನ ಹವ್ಯಾಸ ಬೆಳೆಸಲು ಕಾರ್ಯಕ್ರಮ ನಡೆಸುತ್ತಿದ್ದೇವೆ. ಐದು ತಂಡಗಳ ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆದಿದ್ದಾರೆ. ಎನ್‌ಇಟಿ, ಕೆ–ಸೆಟ್‌ ಪರೀಕ್ಷೆಗಳನ್ನು ಎದುರಿಸುವ ಸಂದರ್ಭದಲ್ಲಿ ಅನುಕೂಲವಾಗಿದೆ ಎಂದಿದ್ದಾರೆ’ ಎಂದು ಹೇಳಿದರು.

ವ್ಯಕ್ತಿತ್ವ ವಿಕಸನಕ್ಕ ‘ಚೈತನ್ಯ’:
‘ಇದಲ್ಲದೇ, ವಿಭಾಗದ ಪ್ರತಿ ಸೆಮಿಸ್ಟರ್‌ನ ಮೊದಲ ತರಗತಿಯಲ್ಲಿ ‘ಚೈತನ್ಯ’ ಶೀರ್ಷಿಕೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರಸ್ತುತ ಹಳೆಗನ್ನಡ ಓದುವವರ ಸಂಖ್ಯೆ ಕಡಿಮೆಯಾಗಿದೆ. ಈ ಕುರಿತು ಆಸಕ್ತಿ ಮೂಡಿಸುವ ಉದ್ದೇಶದಿಂದ ಹಳೆಗನ್ನಡ ಸಾಹಿತ್ಯ ಶಿಬಿರ ನಡೆಸಲೂ ಯೋಜಿಸಲಾಗಿದೆ. 'ಓದು–ವ್ಯಾಖ್ಯಾನ ಕಾರ್ಯಕ್ರಮ ನಡೆಸಲಾಗುವುದು’ ಸ್ಮಾರ್ಟ್‌ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಪಠ್ಯೇತರ ಓದಿನಿಂದ ನನಗೆ ಬಹಳ ಅನುಕೂಲವಾಗಿದೆ. ಈವರೆಗೆ 15ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದೇನೆ. ಸಾರಾಂಶವನ್ನು ಕೆಲವೇ ಪುಟಗಳಲ್ಲಿ ಬರೆದಿಡುವುದರಿಂದ, ಆ ಪುಸ್ತಕದಲ್ಲಿನ ಅಂಶಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗೂ ಸಹಾಯವಾಗಿದೆ. ಎನ್‌ಇಟಿ ಪಾಸು ಮಾಡುವುದಕ್ಕೂ ಪೂರಕವಾಯಿತು’ ಎಂದು ಎಂ.ಎ. ಕನ್ನಡ 3ನೇ ಸೆಮಿಸ್ಟರ್‌ ವಿದ್ಯಾರ್ಥಿ ಸತೀಶ ಬಾಳೋಜಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.