ADVERTISEMENT

ಜ.30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ಕಲಬುರ್ಗಿ: ‘ಸಾರಿಗೆ ನಿಗಮಗಳ ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಜ.30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬರಾವ್ ತಿಳಿಸಿದರು.

‘ಜ.17ರಂದು ಹುಬ್ಬಳ್ಳಿ, ಜ.20ರಂದು ಮೈಸೂರು ಹಾಗೂ ಜ.25ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು. ಜ.25ರಂದು ಈಶಾನ್ಯ, ವಾಯವ್ಯ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನಿಗಮಗಳ ಕಚೇರಿ ಎದುರು ಧರಣಿ ನಡೆಸಲಾಗುವುದು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಕ್ರಮ ವರ್ಗಾವಣೆ ರದ್ದು, ಗ್ರಾಚ್ಯುಟಿ ಹಣ ಬಿಡುಗಡೆ, ರಜೆ ನಗದೀಕರಣ, ವೇತನ ಮತ್ತು ಭವಿಷ್ಯನಿಧಿ ಬಾಕಿ ಬಿಡುಗಡೆ ಮಾಡಬೇಕು. ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಸಾರಿಗೆ ನಿಗಮಗಳಿಗೆ ಮೋಟರ್‌ ವಾಹನ ತೆರಿಗೆಯನ್ನು ಶಾಶ್ವತವಾಗಿ ರದ್ದು ಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೈಗಾರಿಕಾ ಒಪ್ಪಂದದಂತೆ ಮಾನ್ಯತೆ ಪಡೆದಿರುವ ವಿಭಾಗೀಯ ಸಂಘಟನೆಗಳಿಗೆ ಪಾಸುಗಳನ್ನು ವಿತರಿಸಬೇಕು. ಹೆಚ್ಚುವರಿ ಕೆಲಸ ಮಾಡಿದವರಿಗೆ ಹೆಚ್ಚುವರಿ ಹಣ ಕೊಡಬೇಕು. ಎನ್‌ಐಎನ್‌ಸಿ ಪ್ರಕರಣಗಳಲ್ಲಿ ನಿರ್ವಾಹಕರಿಗೆ ಶಿಕ್ಷೆ ವಿಧಿಸಬಾರದು. ನಾಲ್ಕೂ ಸಾರಿಗೆ ನಿಗಮಗಳನ್ನು ಒಂದೇ ನಿಗಮವನ್ನಾಗಿ ಮಾಡಬೇಕು. ವಾಯವ್ಯ ಸಾರಿಗೆ ನಿಗಮದಲ್ಲಿ ಭವಿಷ್ಯ ನಿಧಿ ಆಯುಕ್ತರಿಗೆ ಕಳುಹಿಸಿರುವ ಹಣವನ್ನು ಕೆಎಸ್‌ಆರ್‌ಟಿಸಿ ಭವಿಷ್ಯ ನಿಧಿ ಟ್ರಸ್ಟ್‌ಗೆ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರದಲ್ಲಿ ಅಧಿಕಾರಿದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಮೂರೂವರೆ ವರ್ಷಗಳಲ್ಲಿ ಸಂಘಟಿತ ವಲಯದಲ್ಲಿ 4 ಕೋಟಿ ಹಾಗೂ ಅಸಂಘಟಿತ ವಲಯದಲ್ಲಿ 8 ಕೋಟಿ ಸೇರಿ 12 ಕೋಟಿ ಉದ್ಯೋಗ ನಷ್ಟವಾಗಿವೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಲೇ ಇದೆ. ಆದಾಗ್ಯೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಒಟ್ಟಾರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.