ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಎಸ್‌ಎಫ್‌ಐ ನಾಯಕಿಗೆ ಕಿರುಕುಳ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 11:19 IST
Last Updated 9 ಜನವರಿ 2018, 11:19 IST
ಫೇಸ್‌ಬುಕ್‌ನಲ್ಲಿ ಹಾಕಿವ ಚಿತ್ರ.
ಫೇಸ್‌ಬುಕ್‌ನಲ್ಲಿ ಹಾಕಿವ ಚಿತ್ರ.   

ಮಂಗಳೂರು: ಭಾರತೀಯ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿರುವ ಎಂ.ಕಾಂ ವಿದ್ಯಾರ್ಥಿನಿ ಮಾಧುರಿ ಅವರು 'ಮುಸ್ಲಿಂ ವಿದ್ಯಾರ್ಥಿ' ಜೊತೆಗಿದ್ದ ಫೋಟೊ ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಈ ಸಂಬಂಧ ವಿದ್ಯಾರ್ಥಿ ನಾಯಕಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಧುರಿ ಅವರ ತಾಯಿ ಭಾರತಿ ಬೋಳಾರ ಸಿಪಿಎಂ ಸಂಯೋಜಿತ ಬೀಡಿ ಕಾರ್ಮಿಕರ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಮಗಳು ಅದೇ ಪಕ್ಷದ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಜೊತೆ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಅಧ್ಯಯನ ಶಿಬಿರವೊಂದಕ್ಕೆ ತೆರಳುತ್ತಿದ್ದಾಗ ಬಸ್‌ನಲ್ಲಿ ಸೆಲ್ಫಿ ಚಿತ್ರ ಸೆರೆ ಹಿಡಿದಿದ್ದ. ಅದನ್ನು ಸಹ ಕಾರ್ಯಕರ್ಯತರು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಎಸ್‌ಎಫ್‌ಐ ಕಾರ್ಯಕರ್ತರಾದ ಹಂಝ, ಸುಹಾಸ್‌ ಅಡಿಗ ಮತ್ತು ಗಣೇಶ್ ಬೋಳಾರ ಚಿತ್ರದಲ್ಲಿದ್ದರು.

‘ಹಿಂದೂಪರ ಕಾರ್ಯಕರ್ತರು ಎಂದು ಹೇಳಿಕೊಂಡಿರುವ ಕೆಲವರು ಕೆಲವು ದಿನಗಳಿಂದ ಈ ಚಿತ್ರವನ್ನು ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ‘ಹಂಝ ಕಿನ್ಯಾ ಹಿಂದೂ ಹುಡುಗಿಯರ ಜೊತೆ ಬೈಕ್‌ನಲ್ಲಿ ಓಡಾಡುತ್ತಿರುತ್ತಾನೆ. ಈತನ ಮೇಲೆ ಹಿಂದೂ ಕಾರ್ಯಕರ್ತರು ನಿಗಾ ಇಡಬೇಕು’ ಎಂಬ ಅಡಿಬರಹದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ನನಗೆ ಮಾನಸಿಕ ಹಿಂಸೆಯಾಗಿದೆ’ ಎಂದು ಮಾಧುರಿ ಮಂಗಳೂರು ನಗರ ಸೈಬರ್‌ ಅಪರಾಧ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಭಿನ್ನ ಧರ್ಮದ ಹುಡುಗ, ಹುಡುಗಿಯರು ಒಟ್ಟಾಗಿ ತಿರುಗಾಡುವುದು ಲವ್‌ ಜಿಹಾದ್‌ಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ಇತ್ತೀಚೆಗೆ ಹಲವೆಡೆ ಯುವಕ, ಯುವತಿಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ಅಪಪ್ರಚಾರದಿಂದ ಮನನೊಂದ ವಿದ್ಯಾರ್ಥಿನಿಯೊಬ್ಬರು ಮೂಡಿಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ತಮ್ಮ ವಿರುದ್ಧ ಅಪಪ್ರಚಾರ ನಡೆಸಿ ಮಾನಸಿಕ ಹಿಂಸೆ, ನೋವಿಗೆ ಕಾರಣವಾಗಿರುವವರನ್ನು ಪತ್ತೆಮಾಡಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಯಿಯೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಅವರನ್ನು ಭೇಟಿ ಮಾಡಿದ ಮಾಧುರಿ, ತ್ವರಿತ ಕ್ರಮಕ್ಕೆ ಆಗ್ರಹಿಸಿದರು. ನಂತರ ಸೈಬರ್‌ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದರು. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸುತ್ತಿರುವರು ಹಾಕಿರುವ ಪೋಸ್ಟ್‌ಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.