ADVERTISEMENT

‘ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೇ?’

ಬಿಜೆಪಿ ಐಟಿ ವಿಭಾಗದ ಅಮಿತ್‌ ಮಾಳವೀಯ ಟ್ವೀಟ್‌ಗೆ ಹಲವರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 3:18 IST
Last Updated 11 ಜನವರಿ 2018, 3:18 IST
‘ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೇ?’
‘ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೇ?’   

ಬೆಂಗಳೂರು: ‘ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಹಿಳೆಯ ಮೈ ಮುಟ್ಟಬಹುದೇ?’ ಎಂಬ ಬರಹದೊಂದಿಗೆ ಬಿಜೆಪಿ ರಾಷ್ಟ್ರೀಯ ಘಟಕದ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿರುವ ವಿಡಿಯೊ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಮಾರಂಭವೊಂದರಲ್ಲಿ ಯುವತಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಸಿದ್ದರಾಮಯ್ಯ ಯುವತಿಯೊಬ್ಬರ ತೋಳು ಹಿಡಿದು ಹತ್ತಿರಕ್ಕೆ ಎಳೆದಿರುವ ವಿಡಿಯೊ ಅನ್ನು ಅಮಿತ್‌ ಮಾಳವೀಯ ಮಂಗಳವಾರ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಅನ್ನು 1,700ಕ್ಕೂ ಹೆಚ್ಚು ಮಂದಿ ರಿಟ್ವೀಟ್‌ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಈ ಟ್ವೀಟ್‌ಗೆ ಲೈಕ್‌ ಒತ್ತಿದ್ದಾರೆ.

ಈ ಟ್ವೀಟ್‌ ವಿರೋಧಿಸಿ ಪ್ರತಿಕ್ರಿಯೆ ಬರೆದಿರುವ ಹಲವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀತಾ ಅಂಬಾನಿ ಹಾಗೂ ಇನ್ನಿಬ್ಬರು ಮಹಿಳೆಯರ ಕೈ ಹಿಡಿದಿರುವ ಚಿತ್ರ, ಮಹಿಳೆಯೊಬ್ಬರನ್ನು ತಬ್ಬಿರುವ ಚಿತ್ರ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಚಿವೆ ಉಮಾ ಭಾರತಿ ಅವರ ಗಲ್ಲ ಹಿಡಿದಿರುವ ಚಿತ್ರಗಳನ್ನು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಬಿಜೆಪಿ ಶಾಸಕರಾಗಿದ್ದವರು ಸದನದಲ್ಲಿ ಅಶ್ಲೀಲ ದೃಶ್ಯ ನೋಡಿದ್ದು ಸರಿಯೇ’ ಎಂದು ಪ್ರಶ್ನಿಸಿರುವ ಕೆಲವರು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಆ ದೃಶ್ಯಗಳ ವಿಡಿಯೊ ಗ್ರಾಬ್‌ ಅನ್ನು ಟ್ವೀಟ್ ಮಾಡಿದ್ದಾರೆ.

‘ಕಾಮಾಲೆ ಕಣ್ಣಿಗೆ ನೋಡಿದ್ದೆಲ್ಲಾ ಹಳದಿಯಾಗಿ ಕಾಣುತ್ತದೆ. ಆದರೆ, ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಈ ರೀತಿ ಆರೋಪ ಮಾಡುವ ಕಪಟ ವೇಷದಾರಿಗಳಾದ ಸಂಘ ಪರಿವಾರದವರು ಪರಿವಾರವೆ ಇಲ್ಲದೆ ಸಂಘ ಹೇಗೆ ಕಟ್ಟುತ್ತಿದ್ದಾರೆ ಎಂಬುದು ನಮ್ಮನ್ನು ಕಾಡುವ ಪ್ರಶ್ನೆ? ಅವರಿಗೆ ನಾವು ಏನನ್ನಬೇಕು?’ ಎಂದು ಬಸವರಾಜು ಎ.ಪಿ. ಎಂಬುವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಆ ಹುಡುಗಿ ಸಿದ್ದರಾಮಯ್ಯ ಅವರ ಮೊಮ್ಮಗಳ ವಯಸ್ಸಿನವಳು. ರಟ್ಟೆ ಹಿಡಿದು ಹತ್ತಿರಕ್ಕೆ ಕರೆದರೆ ತಪ್ಪೇನು?’ ಎಂದು ಮಲ್ಲೇಶ್‌ ರೆಡ್ಡಿ ಎಂಬುವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.