ADVERTISEMENT

ರೌಡಿ ‘ಟಾರ್ಗೆಟ್‌’ ಇಲ್ಯಾಸ್‌ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 20:08 IST
Last Updated 13 ಜನವರಿ 2018, 20:08 IST
ರೌಡಿ ‘ಟಾರ್ಗೆಟ್‌’ ಇಲ್ಯಾಸ್‌ ಕೊಲೆ
ರೌಡಿ ‘ಟಾರ್ಗೆಟ್‌’ ಇಲ್ಯಾಸ್‌ ಕೊಲೆ   

ಮಂಗಳೂರು: ‘ಟಾರ್ಗೆಟ್‌’ ಹೆಸರಿನ ಗುಂಪು ಕಟ್ಟಿಕೊಂಡು ಉಳ್ಳಾಲ ಸೇರಿದಂತೆ ಹಲವೆಡೆ ಸುಲಿಗೆ, ಡಕಾಯಿತಿ, ಕೊಲೆಯತ್ನ, ಅತ್ಯಾಚಾರದಂತಹ ಪಾತಕಗಳನ್ನು ಎಸಗುತ್ತಿದ್ದ ರೌಡಿ ‘ಟಾರ್ಗೆಟ್‌’ ಇಲ್ಯಾಸ್‌ನನ್ನು (31) ಶನಿವಾರ ಬೆಳಿಗ್ಗೆ ಕೊಲೆ ಮಾಡಲಾಗಿದೆ. ಆತ ತನ್ನ ಮನೆಯಲ್ಲಿ ಮಲಗಿರುವಾಗಲೇ ಹತ್ಯೆ ನಡೆದಿದೆ.

ಕುಡ್ಪಾಡಿ ಬದ್ರಿಯಾ ಜುಮ್ಮಾ ಮಸೀದಿಯ ಎದುರಿಗಿರುವ ಮಿಸ್ತಾಹ್‌ ಗ್ಯಾಲೋರ್‌ ಅಪಾರ್ಟ್‌ಮೆಂಟ್‌ನ 303ನೇ ಸಂಖ್ಯೆಯ ಫ್ಲ್ಯಾಟ್‌ನಲ್ಲಿ ಇಲ್ಯಾಸ್ ಕುಟುಂಬ ವಾಸವಿದೆ. ಶನಿವಾರ ಬೆಳಿಗ್ಗೆ 8.45ಕ್ಕೆ ಇಬ್ಬರು ಅಪರಿಚಿತರು ಫ್ಲ್ಯಾಟ್‌ಗೆ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಕುಟುಂಬದವರು ತಕ್ಷಣವೇ ಇಲ್ಯಾಸ್‌ನನ್ನು ಕಂಕನಾಡಿಯ ಫಾದರ್‌ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಳ್ಳಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷನೂ ಆಗಿದ್ದ ಇಲ್ಯಾಸ್‌, ಕೊಲೆಯತ್ನ ಪ್ರಕರಣವೊಂದರಲ್ಲಿ ನವೆಂಬರ್‌ ತಿಂಗಳ ಕೊನೆಯ ವಾರ ಬಂಧಿತನಾಗಿದ್ದ. ಸೋಮವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಐದೇ ದಿನಗಳಲ್ಲಿ ಆತನ ಕೊಲೆಯಾಗಿದೆ. ರೌಡಿ ಗುಂಪುಗಳ ನಡುವಣ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

24 ಪ್ರಕರಣ: 18ನೇ ವಯಸ್ಸಿನಲ್ಲಿಯೇ ಇಲ್ಯಾಸ್‌ ಅಪರಾಧ ಜಗತ್ತು ಪ್ರವೇಶಿಸಿದ್ದ. ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ‘ಟಾರ್ಗೆಟ್‌’ ಎಂಬ ಹೆಸರಿನಲ್ಲಿ ಕಾರುಗಳನ್ನು ಬಾಡಿಗೆಗೆ ನೀಡುವ ವ್ಯವಹಾರ ಆರಂಭಿಸಿದ್ದ. ಅಲ್ಲಿಯೇ ಯುವಕರ ತಂಡ ಕಟ್ಟಿಕೊಂಡು ಉದ್ಯಮಿಗಳು, ಬಿಲ್ಡರ್‌ಗಳು, ಶ್ರೀಮಂತರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ. ಯುವತಿಯರನ್ನು ಬಳಸಿಕೊಂಡು ಶ್ರೀಮಂತರನ್ನು ‘ಹನಿ ಟ್ರ್ಯಾಪ್‌’ ಮಾಡಿ ಹಣ ಸುಲಿಗೆ ಮಾಡುತ್ತಿದ್ದ.

ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ, ಸುಲಿಗೆ, ಡಕಾಯಿತಿ, ಕೊಲೆಯತ್ನ ಸೇರಿದಂತೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲೇ ಈತನ ವಿರುದ್ಧ 19 ಪ್ರಕರಣಗಳು ದಾಖಲಾಗಿದ್ದವು. ಮಂಗಳೂರು ನಗರದ ವ್ಯಾಪ್ತಿಯಲ್ಲಿ ಒಟ್ಟು 24 ಪ್ರಕರಣಗಳಿವೆ. ಯಲ್ಲಾಪುರದಲ್ಲಿ ಡಕಾಯಿತಿ ಪ್ರಕರಣ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಗಿಲು ಬಡಿದ ಆಗಂತುಕರು, ಕೋಣೆ ತೋರಿದ ಅತ್ತೆ

‘ಶನಿವಾರ ಬೆಳಿಗ್ಗೆ ಇಲ್ಯಾಸ್‌ನ ಪತ್ನಿ ಮಾರುಕಟ್ಟೆಗೆ ತೆರಳಿದ್ದರು. ಒಂದೂವರೆ ವರ್ಷ ವಯಸ್ಸಿನ ಮಗಳ ಜೊತೆಯಲ್ಲಿ ಇಲ್ಯಾಸ್‌ ಕೋಣೆಯೊಂದರಲ್ಲಿ ಮಲಗಿದ್ದ. ಆ ಸಮಯದಲ್ಲಿ ಅತ್ತೆ ಮತ್ತು ಬಾವಮೈದ ಮನೆಯಲ್ಲೇ ಇದ್ದರು. ಬಾವಮೈದ ಬೇರೊಂದು ಕೋಣೆಯಲ್ಲಿ ಮಲಗಿದ್ದ. ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಗೆ ಬಂದ ಇಬ್ಬರು ದುಷ್ಕರ್ಮಿಗಳು ಪಕ್ಕದ ಮನೆಯವರಲ್ಲಿ ‘ಇಲ್ಯಾಸ್‌ ಮನೆ ಎಲ್ಲಿ’ ಎಂದು ಕೇಳಿದ್ದಾರೆ. ಬಳಿಕ ಮೃತನ ಮನೆಯ ಬಾಗಿಲು ಬಡಿದಿದ್ದಾರೆ. ಆತನ ಅತ್ತೆ ಬಾಗಿಲು ತೆರೆದಿದ್ದಾರೆ. ‘ಇಲ್ಯಾಸ್‌ ಎಲ್ಲಿದ್ದಾನೆ’ ಎಂದು ಕೇಳಿದ್ದಾರೆ. ಆತ ಮಲಗಿರುವ ಕೋಣೆ ತೋರಿಸಿದ ಅವರು, ಸ್ನೇಹಿತರು ಬಂದಿರಬಹುದು ಎಂದು ಚಹಾ ಮಾಡಲು ತೆರಳಿದ್ದಾರೆ. ಆಗ ಆರೋಪಿಗಳು ಇಲ್ಯಾಸ್‌ನ ಎದೆಗೆ ಇರಿದು ಪರಾರಿಯಾಗಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್ ತಿಳಿಸಿದರು.

ಹಿಂದೆ ಟಾರ್ಗೆಟ್‌ ಗುಂಪಿನಲ್ಲಿದ್ದು, ಈಗ ಪ್ರತ್ಯೇಕ ಗುಂಪಿನಲ್ಲಿರುವ ದಾವೂದ್‌ ಧರ್ಮನಗರ ಮತ್ತು ಸಫ್ವಾನ್‌ ತಂಡದವರು ಕೃತ್ಯ ಎಸಗಿರಬಹುದು ಎಂದು ಮೃತನ ಪತ್ನಿ ದೂರು ನೀಡಿದ್ದಾರೆ. ನಾಲ್ವರು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಕೆಲವರನ್ನು ಮೃತನ ಕುಟುಂಬದವರು ಈಗಾಗಲೇ ಗುರುತಿಸಿದ್ದಾರೆ. ಆರೋಪಿಗಳ ಖಚಿತ ಸುಳಿವು ಲಭ್ಯವಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

***

ದ್ವೇಷದ ಕೊಲೆ?

* ಕೊಲೆಯತ್ನ, ಡಕಾಯಿತಿ, ಅತ್ಯಾಚಾರ, ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಇಲ್ಯಾಸ್

* ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿ ಸೋಮವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ

* ರೌಡಿ ಗುಂಪುಗಳ ನಡುವಣ ದ್ವೇಷದಿಂದ ಕೊಲೆ ನಡೆದಿರುವ ಬಗ್ಗೆ ಪೊಲೀಸರ ಶಂಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.