ADVERTISEMENT

ಕಾಡಿನ ಮೊಲಕ್ಕೆ ಕಿವಿಯೋಲೆ ಹಾಕುವ ಭಕ್ತರು!

ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಕಂಚೀಪುರದ ಕಂಚೀವರದರಾಜಸ್ವಾಮಿ ದೇಗುಲದ ಭಕ್ತರು ಸಂಕ್ರಾಂತಿ ಸಂಭ್ರಮಕ್ಕೆ ಮೊಲ ಹಿಡಿದು ತಂದಿರುವುದು.
ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಕಂಚೀಪುರದ ಕಂಚೀವರದರಾಜಸ್ವಾಮಿ ದೇಗುಲದ ಭಕ್ತರು ಸಂಕ್ರಾಂತಿ ಸಂಭ್ರಮಕ್ಕೆ ಮೊಲ ಹಿಡಿದು ತಂದಿರುವುದು.   

ಹೊಸದುರ್ಗ: ಜನಿಸಿದ ಮಕ್ಕಳಿಗೆ, ಸಾಕು ಪ್ರಾಣಿಗಳಿಗೆ ಪ್ರೀತಿಯಿಂದ ಕಿವಿ ಚುಚ್ಚಿ ಓಲೆ, ರಿಂಗು ಹಾಕುವುದು ಸಾಮಾನ್ಯ. ಆದರೆ, ತಾಲ್ಲೂಕಿನ ಐತಿಹಾಸಿಕ ಕಂಚೀಪುರದ ಕಂಚೀವರದರಾಜ ಸ್ವಾಮಿಯ ಭಕ್ತರು ಸಂಕ್ರಾಂತಿಯಂದು ಕಾಡಿನಲ್ಲಿದ್ದ ಮೊಲವನ್ನು ಜೀವಂತವಾಗಿ ಹಿಡಿದು ತಂದು, ದೇವರ ಸನ್ನಿಧಿಯಲ್ಲಿ ಅದಕ್ಕೆ ಕಿವಿಯೋಲೆ ಹಾಕಿ ಮತ್ತೆ ಕಾಡಿಗೆ ಬಿಡುವ ಮೂಲಕ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

ನೂರಾರು ವರ್ಷಗಳಿಂದಲೂ ಈ ಆಚರಣೆ ಮಾಡಲಾಗುತ್ತಿದೆ. ಶೂನ್ಯ ಮಾಸ ಮಕರ ರಾಶಿಯಿಂದ ಪ್ರವೇಶ ಆಗುತ್ತದೆ. ಇದರಿಂದ ಕಂಚೀವರದರಾಜ ಸ್ವಾಮಿ ಮಹಿಮೆ ಕಳೆಗುಂದಬಹುದು ಎಂದು ಇಲ್ಲಿನ ಭಕ್ತರು ಪ್ರತಿದಿನ ಸೂರ್ಯೋದಕ್ಕೆ ಮೊದಲು ಸ್ವಾಮಿಗೆ ವಿಶೇಷ ನೈವೇದ್ಯ, ಪೂಜೆ ಮಾಡುತ್ತಾರೆ.

‘ಶೂನ್ಯ ಮಾಸದ ಕೊನೆಯ ದಿನ ಅಂದರೆ ಮಕರ ಸಂಕ್ರಾಂತಿಯಂದು ಬೆಳಿಗ್ಗೆ ನೂರಾರು ಮಂದಿ ಭಕ್ತರು ಬಲೆ ತೆಗೆದುಕೊಂಡು ತಂಡೋಪ ತಂಡವಾಗಿ ಗ್ರಾಮದ ಸಮೀಪದ ಕಾಡಿಗೆ ಹೋಗುತ್ತಾರೆ. ಮೊಲ ಸಿಗುವವರೆಗೂ ಕಾಡಿನಿಂದ ವಾಪಸ್‌ ಬರುವುದಿಲ್ಲ. ಬೇಟೆಗಾರಿಕೆ ಕೌಶಲ ಇರುವವರು ಮೊಲ ಇರುವ ಜಾಗ ನೋಡಿ, ಬಲೆ ಬೀಸಿ ಜೀವಂತವಾಗಿ ಮೊಲ ಹಿಡಿದು ದೇವಸ್ಥಾನಕ್ಕೆ ತರುತ್ತಾರೆ' ಎನ್ನುತ್ತಾರೆ ಗ್ರಾಮದ ಮುಖಂಡ ಡಿ.ಪರುಶುರಾಮಪ್ಪ.

ADVERTISEMENT

ದೇವರ ಸನ್ನಿಧಿಯಲ್ಲಿ ಮೊಲಕ್ಕೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ಅದರ ಕಿವಿ ಚುಚ್ಚಿ ರಿಂಗು, ಕಿವಿಯೋಲೆ ಅಥವಾ ಗೆಜ್ಜೆ ಹಾಕುತ್ತಾರೆ. ನಂತರ ಕಂಚೀವರದರಾಜ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಪೂಜಾ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತದೆ.

‘ಶೃಂಗಾರಗೊಳಿಸಿದ್ದ ಮೊಲವನ್ನು ಸ್ವಾಮಿಗೆ ಮೂರು ಬಾರಿ ನೀವಳಿಸುತ್ತಾರೆ. ನಂತರ ವಿವಿಧ ಜನಪದ ಕಲಾತಂಡದ ಮೆರವಣಿಗೆಯೊಂದಿಗೆ ಮೊಲವನ್ನು ಊರ ಬಾಗಿಲಿಗೆ ತರಲಾಗುತ್ತದೆ. ಅಲ್ಲಿ ಮತ್ತೆ ಮೊಲವನ್ನು ಮೂರು ಬಾರಿ ನೀವಳಿಸಿ, ಸಂಜೆ ಮೊಲವನ್ನು ಜೀವಂತವಾಗಿಯೇ ಕಾಡಿಗೆ ಬಿಡುತ್ತೇವೆ. ಈ ರೀತಿ ಮಾಡುವುದರಿಂದ ಶೂನ್ಯಮಾಸದ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಭಕ್ತರಿಗಿದೆ’ ಎನ್ನುತ್ತಾರೆ ಪೂಜಾರ ದೊಡ್ಡಯ್ಯ.

* ಮುಂದಿನ ವರ್ಷ ಮತ್ತೊಮ್ಮೆ ಅದೇ ಮೊಲ ಸಿಗಬಾರದು ಎಂಬ ಉದ್ದೇಶದಿಂದ ಕಾಡಿನಿಂದ ಹಿಡಿದು ತಂದ ಮೊಲಕ್ಕೆ ಕಿವಿಯೋಲೆ ಹಾಕಲಾಗುತ್ತದೆ. - ಡಿ.ಪರುಶುರಾಮಪ್ಪ, ಗ್ರಾಮದ ಮುಖಂಡ

- ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.