ADVERTISEMENT

ಎಸ್‌ಐಟಿಗೆ ಕಾಲಮಿತಿ ನಿಗದಿ ಅಸಾಧ್ಯ: ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಪಿ.ವಿಶ್ವನಾಥ ಶೆಟ್ಟ
ಪಿ.ವಿಶ್ವನಾಥ ಶೆಟ್ಟ   

ಬಳ್ಳಾರಿ: ‘ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಕಾಲಮಿತಿ ನಿಗದಿಪಡಿಸಲು ಆಗುವುದಿಲ್ಲ. ಸಾಧ್ಯವಾದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ಹೇಳಬಹುದಷ್ಟೇ. ತನಿಖಾ ಅವಧಿಯನ್ನು ಮೂರನೇ ಬಾರಿಗೆ ಒಂದು ವರ್ಷ ಕಾಲ ವಿಸ್ತರಿಸಲಾಗಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ ಹೇಳಿದರು.

‘ಎಸ್‍ಐಟಿ ತನಿಖೆಯನ್ನು ಮೇಲ್ವಿಚಾರಣೆ ಮಾಡುವೆ. ಆದರೆ, ತನಿಖೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಎಸ್‍ಐಟಿ ತಂಡವೇ ನೇರವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ನನ್ನ ಅಭಿಪ್ರಾಯ ಪಡೆದುಕೊಂಡೇ ಎಸ್‍ಐಟಿಗೆ ನೂತನ ಐಪಿಎಸ್‌ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಇನ್‌ಸ್ಪೆಕ್ಟರ್‌ ಮಟ್ಟದ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯ ತನಿಖೆ ನಡೆಸುವುದರಿಂದ ಎಸ್ಪಿ ಹಾಗೂ ಅವರಿಗಿಂತ ಮೇಲ್ಮಟ್ಟದ ಅಧಿಕಾರಿಗಳ ವರ್ಗಾವಣೆಯು ತನಿಖೆ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದರು.

ADVERTISEMENT

ಪತ್ರ ಬರೆಯಿರಿ
ಅದಿರು ಉತ್ಖನನದ ಪ್ರಮಾಣದ ಬಗ್ಗೆ ಎಸ್‌ಐಟಿಗೆ ವರದಿ ನೀಡದೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಸಹಕಾರ ತೋರುತ್ತಿದೆ ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ. ನೀವೇ ಎಸ್‌ಐಟಿಗೆ ಅಥವಾ ನನಗೆ ಪತ್ರ ಬರೆಯಿರಿ. ಕ್ರಮ ಕೈಗೊಳ್ಳುವೆ’ ಎಂದು ಸುದ್ದಿಗಾರರಿಗೆ ಹೇಳಿದರು.

‘ರಾಜ್ಯದಲ್ಲಿ ಮರಳಿನ ಕೊರತೆಯ ಸಮಸ್ಯೆ ಕುರಿತು ಸ್ವಯಂಪ್ರೇರಿತವಾಗಿ ಕೆಲವು ಪ್ರಕರಣ ದಾಖಲಿಸಿದ್ದು, ತನಿಖೆಗೆ ಆದೇಶಿಸಿರುವೆ’ ಎಂದರು.

‘ಲೋಕಾಯುಕ್ತ ಕಾಯ್ದೆಯಲ್ಲಿ ಗೌಪ್ಯತೆ ಕಾಪಾಡಬೇಕೆಂಬ ನಿಯಮ ಇದೆ. ತನಿಖೆಯು ಹಾದಿ ತಪ್ಪಬಾರದು ಎಂಬ ಕಾರಣಕ್ಕೆ ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

‘ಸಿಬಿಐ ಕೈಬಿಟ್ಟ ಪ್ರಕರಣಗಳನ್ನು ಎಸ್‍ಐಟಿಗೆ ವಹಿಸುವ ವಿಚಾರ ಗಮನಕ್ಕೆ ಬಂದಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಅದು ನನ್ನ ಗಮನಕ್ಕೆ ಬಂದರೂ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ನನಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.