ADVERTISEMENT

ಹಾಸನ: ನಾಲ್ಕೂವರೆ ವರ್ಷಗಳಲ್ಲಿ ಐದು ಜಿಲ್ಲಾಧಿಕಾರಿಗಳ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಬೆಂಗಳೂರು: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ ಐದು ಜಿಲ್ಲಾಧಿಕಾರಿಗಳು ಬದಲಾವಣೆ ಆಗಿದ್ದಾರೆ.

ಈಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ವರ್ಗಾವಣೆ ಮತ್ತು ಅದಕ್ಕೆ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಡೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ರೋಹಿಣಿ ಆರು ತಿಂಗಳಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾಲ್ಕೂವರೆ ವರ್ಷಗಳಲ್ಲಿ ಸುದೀರ್ಘ ಕೆಲಸ ಮಾಡಿದವರು ಉಮೇಶ್‌ ಎಚ್‌.ಕುಸುಗಲ್‌. ಇವರು 2014 ರ ಜನವರಿಯಿಂದ 2016 ರ ಜುಲೈವರೆಗೆ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಕೆ.ಪಿ.ಮೋಹನ್‌ ರಾಜ್‌, ವಿ. ಅನ್ಬುಕುಮಾರ್‌ ಮತ್ತು ವಿ. ಚೈತ್ರ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ಅನ್ಬುಕುಮಾರ್ ವರ್ಗಾವಣೆ ಆದಾಗಲೂ ತೀವ್ರ ಟೀಕೆಗಳು ಕೇಳಿ ಬಂದಿದ್ದವು. ಈ ವರ್ಗಾವಣೆಯ ಹಿಂದೆ ರಾಜಕೀಯ ಇದೆ ಎಂದು ಹೊಳೆನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದ್ದರು.

ADVERTISEMENT

‘ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ನಿಯೋಜನೆಗೊಂಡವರು ಎಂದೇ ಜನಪ್ರತಿನಿಧಿ ಕಾಯ್ದೆ ಪರಿಗಣಿಸುತ್ತದೆ’ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

‘ವರ್ಗಾವಣೆಗೆ ಒಪ್ಪಿಗೆ ನೀಡುವಂತೆ ಮುಖ್ಯಕಾರ್ಯದರ್ಶಿ ಬರೆದಿರುವ ಪತ್ರ ಸಿಕ್ಕಿಲ್ಲ. ಪತ್ರ ಸಿಕ್ಕಿದ ನಂತರ ಅದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.