ADVERTISEMENT

ತೆರಿಗೆ ವಂಚಕ ಜಾಲ ಐ.ಟಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳು ಲೆಕ್ಕಪರಿಶೋಧಕನ ಜೊತೆ ಸೇರಿ ತೆರಿಗೆ ವಂಚಿಸುತ್ತಿದ್ದ ಪ್ರಕರಣವನ್ನು ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ನಗರದ ಲೆಕ್ಕ ಪರಿಶೋಧಕನ ಕಚೇರಿಯಲ್ಲಿ ಬುಧವಾರ ಶೋಧ ನಡೆಸಿರುವ ಐ.ಟಿ ಅಧಿಕಾರಿಗಳು, ಐಬಿಎಂ, ವೊಡಾಫೋನ್, ಬಯೊಕಾನ್, ಇನ್ಫೊಸಿಸ್, ಸಪ್ಲಾಬ್ಸ್, ಐಸಿಐಸಿಐ ಬ್ಯಾಂಕ್, ಸಿಐಎಸಿಒ, ಥಾಮ್ಸನ್ ರಾಯಿಟರ್ಸ್ ಇಂಡಿಯಾ ಲಿಮಿಟೆಡ್ ಸೇರಿ 50 ಕಂಪನಿಗಳ ಒಂದು ಸಾವಿರ ಉದ್ಯೋಗಿಗಳು ₹18 ಕೋಟಿ ತೆರಿಗೆ ವಂಚಿಸಿರುವ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಒಮ್ಮೆ ತೆರಿಗೆ ಪಾವತಿಸಿದ್ದ ಈ ಉದ್ಯೋಗಿಗಳು ಪರಿಷ್ಕೃತಗೊಳಿಸಿ ಮತ್ತೊಮ್ಮೆ ದಾಖಲೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ಮನೆ ಸಾಲಕ್ಕೆ ಸಂಬಂಧಿಸಿದ ಹಾಗೂ ಇತರ ಸುಳ್ಳು ದಾಖಲೆಗಳನ್ನು ಸೇರಿಸಿ ತೆರಿಗೆ ಕಡಿತದ ಲಾಭ ಪಡೆದಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಲೆಕ್ಕ ಪರಿಶೋಧಕ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವುದು ಬಹಿರಂಗವಾಗಿದೆ ಎಂದು ಐ.ಟಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಏನಾದರೂ ದಾಖಲೆ ತೋರಿಸಿ ತೆರಿಗೆ ಕಡಿತ ಮಾಡಿಸಿ ಕೊಡುವುದಾಗಿ ಲೆಕ್ಕಪರಿಶೋಧಕರೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಶೇ 10ರಷ್ಟು ಸೇವಾ ಶುಲ್ಕ ಪಡೆಯುತ್ತಿದ್ದರು’ ಎಂದು ಉದ್ಯೋಗಿಗಳು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಲೆಕ್ಕ ಪರಿಶೋಧಕನ ಜೊತೆ ನಡೆಸಿರುವ ವಾಟ್ಸ್‌ಆ್ಯಪ್ ಸಂದೇಶಗಳನ್ನು ತೋರಿಸಿದ್ದಾರೆ ಎಂದೂ ವಿವರಿಸಿದ್ದಾರೆ.

ನಕಲಿ ದಾಖಲೆಗಳು ವಶಕ್ಕೆ ಪಡೆಯಲಾಗಿದ್ದು, ಉದ್ಯೋಗಿಗಳ ವಿಚಾರಣೆ ನಡೆಸಲಾಗುತ್ತಿದೆ. ಮಧ್ಯವರ್ತಿಯಾಗಿ ಸರ್ಕಾರಕ್ಕೆ ಮೋಸ ಮಾಡಿರುವ ಲೆಕ್ಕ ಪರಿಶೋಧಕನ ವಿರುದ್ಧ ಆದಾಯ ತೆರಿಗೆ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.