ADVERTISEMENT

ಪದ್ಮಶ್ರೀ ಬೇಡ ಎಂದ ಸಿದ್ಧೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:33 IST
Last Updated 26 ಜನವರಿ 2018, 19:33 IST
ಸಿದ್ಧೇಶ್ವರ ಸ್ವಾಮೀಜಿ
ಸಿದ್ಧೇಶ್ವರ ಸ್ವಾಮೀಜಿ   

ವಿಜಯಪುರ: ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರು ತಮಗೆ ಕೊಟ್ಟಿರುವ ‘ಪದ್ಮಶ್ರೀ’ ಪ್ರಶಸ್ತಿಯನ್ನು ಗೌರವದೊಂದಿಗೆ ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಈ ಪ್ರಶಸ್ತಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೆಲಸ ಮಾಡಿದಂತಹ ವ್ಯಕ್ತಿಗಳಿಗೆ ಸಲ್ಲಬೇಕು. ನಾನೊಬ್ಬ ಸಾಮಾನ್ಯ ಆಧ್ಯಾತ್ಮಿಕ ಜೀವಿ. ನನಗೆ ಇದರ ಅವಶ್ಯಕತೆ ಇಲ್ಲ. ಗೌರವದೊಂದಿಗೆ ಇದನ್ನು ಹಿಂತಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ’ ಎಂಬ ಒಕ್ಕಣೆಯುಳ್ಳ ಪತ್ರಕ್ಕೆ ಸಿದ್ಧೇಶ್ವರ ಸ್ವಾಮೀಜಿ ಸಹಿ ಹಾಕಿದ್ದಾರೆ.

ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಕಲಬುರ್ಗಿಯಲ್ಲಿ ನಡೆಯುತ್ತಿದೆ. ಅವರು ಅಲ್ಲೇ ವಾಸ್ತವ್ಯ ಮಾಡಿದ್ದು, ವಾಯುವಿಹಾರ, ಪ್ರವಚನ, ಪತ್ರಿಕೆ ಓದು ಪೂರೈಸಿದ ಬಳಿಕ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಒಬ್ಬರೇ ಮಾತುಕತೆ ನಡೆಸಿದರು. ಬಳಿಕ ಪತ್ರವನ್ನು ಕೊಟ್ಟು ಪ್ರಧಾನಿಗೆ ತಲುಪಿಸಿ ಎಂದು ಹೇಳಿ ಕಳುಹಿಸಿದರು ಎಂದು ಗೊತ್ತಾಗಿದೆ.

ADVERTISEMENT

‘‘ಶುಕ್ರವಾರ ನಸುಕಿನಲ್ಲಿ ವಾಯು ವಿಹಾರಕ್ಕೆ ಸಿದ್ಧರಾಗಿ ತಮ್ಮ ಕೋಣೆಯಿಂದ ಹೊರ ಬರುತ್ತಿದ್ದಂತೆ, ‘ಪದ್ಮಶ್ರೀ’ ಘೋಷಿಸಿರುವ ವಿಷಯವನ್ನು ಅವರ ಗಮನಕ್ಕೆ ತಂದೆವು. ‘ಈ ಬಗ್ಗೆ ನಮ್ಗೇನೂ ಗೊತ್ತಿಲ್ಲ. ಘೋಷಣೆಗೂ ಮುನ್ನ ಒಂದ್‌ ಮಾತ್‌ ಕೇಳ್ಬೇಕಿತ್ತು’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು’’ ಎಂದು ಸ್ವಾಮೀಜಿ ಜತೆಯಲ್ಲಿದ್ದ ಆತ್ಮಾರಾಮ್‌ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆಯೂ ಹಲವು ವಿಶ್ವವಿದ್ಯಾಲಯಗಳು ‘ಗೌರವ ಡಾಕ್ಟರೇಟ್‌’ ಸ್ವೀಕರಿಸುವಂತೆ ಮನವಿ ಮಾಡಿದ್ದವು. ಹಲವು ಸಂಘ– ಸಂಸ್ಥೆಗಳು ಪ್ರಶಸ್ತಿ ನೀಡಲು ಮುಂದಾಗಿದ್ದವು. ಆ ಸಂದರ್ಭದಲ್ಲಿ ಅವರಿಗೆಲ್ಲ ಯಾವುದೂ ಬೇಡ ಎಂದಿದ್ದರು’ ಎಂದು ಅವರು ವಿವರಿಸಿದರು.

* ಸಿದ್ಧೇಶ್ವರ ಸ್ವಾಮೀಜಿ ನನಗೆ ಕೆಲ ಮಾತು ಹೇಳಿದ್ದಾರೆ. ಅವರ ಸೂಚನೆಯಂತೆ ನನ್ನ ಕಚೇರಿಯಿಂದಲೇ ಪ್ರಧಾನಮಂತ್ರಿ ಕಚೇರಿಗೆ ಪತ್ರ ಕಳುಹಿಸಿರುವೆ.

– ಬಸವರಾಜ ಪಾಟೀಲ ಸೇಡಂ, ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.