ADVERTISEMENT

‘ಪುನಃ ಮುಖ್ಯಮಂತ್ರಿ ಮಾಡಿ ಋಣ ತೀರಿಸಿ’

ಪರಿಶಿಷ್ಟರಿಗೆ ಸಚಿವ ಆಂಜನೇಯ ಮನವಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ಬೆಂಗಳೂರು: ‘ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಅವರ ಋಣ ತೀರಿಸಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮನವಿ ಮಾಡಿದರು.

‌ಪರಿಶಿಷ್ಟ ಜಾತಿ ವರ್ಗದ ಉದ್ಯಮಿಗಳ ಜತೆ ಕೈಗಾರಿಕಾ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಸಮುದಾಯದವರು ಕೇಳಿದ ಎಲ್ಲವನ್ನೂ ರಾಜ್ಯ ಸರ್ಕಾರ ನೀಡಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ₹ 50 ಲಕ್ಷದವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಲಾಗಿದ್ದು, ಆ ಮೊತ್ತವನ್ನು ₹ 1 ಕೋಟಿಗೆ ಏರಿಸಲು ಉದ್ದೇಶಿಸಲಾಗಿದೆ’ ಎಂದರು.

‘ಪರಿಶಿಷ್ಟ ಜಾತಿ ವರ್ಗದ ಕೈಗಾರಿಕೋದ್ಯಮಗಳಿಗೂ ಸಾಕಷ್ಟು ಸವಲತ್ತು ನೀಡಿದೆ. ಶೇ 4ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಕೈಗಾರಿಕಾ ಶೆಡ್‌ಗಳ ಹಂಚಿಕೆಯಲ್ಲೂ ಮೀಸಲಾತಿ ಒದಗಿಸಲಾಗಿದೆ. ಕೈಗಾರಿಕಾ ನಿವೇಶನ ಹಾಗೂ ಶೆಡ್‌ ಖರೀದಿಸಿ ಸಾಲ ಪಾವತಿಸದ ಕೈಗಾರಿಕೋದ್ಯಮಿಗಳ ಬಡ್ಡಿ ಮನ್ನಾ ಮಾಡಲಾಗಿದೆ ಎಂ‌ದರು.

ADVERTISEMENT

ಮುಜರಾಯಿ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ, ‘ಗಾರ್ಮೆಂಟ್ಸ್‌‌ಗಳನ್ನು ಆರಂಭಿಸುವ ಪರಿಶಿಷ್ಟ ಸಮುದಾಯದವರಿಗೆ ಶೇ‌ 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.