ADVERTISEMENT

ಬೀದರ್‌: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 8:22 IST
Last Updated 30 ಜನವರಿ 2018, 8:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀದರ್: ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಬೀದರ್‌ ಬಂದ್‌ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಘಟನೆಯಲ್ಲಿ ಸಂಸದ ಭಗವಂತ ಖೂಬಾ ಸೇರಿದಂತೆ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೊಲೀಸ್‌ ವಾಹನಗಳು ಜಖಂಗೊಂಡಿವೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.

‘ಕಲ್ಲುತೂರಾಟ ಮತ್ತು ಲಾಠಿ ಪ್ರಹಾರ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿಗೆ ಅವರು ಮನವಿ ಸಲ್ಲಿಸಿದರು.

ADVERTISEMENT

ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ, ಶ್ರೀರಾಮ ಸೇನೆ, ಎಬಿವಿಪಿ, ಸವಿತಾ ಸಮಾಜ ಜಿಲ್ಲಾ ಘಟಕ ಸೇರಿ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.

‘ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ. ಓಲ್ಡ್‌ ಸಿಟಿ ಕಡೆಗೆ ಮೆರವಣಿಗೆಯಲ್ಲಿ ತೆರಳುವುದಾಗಿ ಕೆಲವರು ಹೇಳಿದರು. (ಓಲ್ಡ್‌ ಸಿಟಿಯಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಾಗಿದೆ). ನಾವು ಅದಕ್ಕೆ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು. ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಭಾಯಿಸಿದೆವು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.