ADVERTISEMENT

ಅಕ್ರಮ ಅದಿರು ತನಿಖೆಗೆ ಉಪಗ್ರಹ ಚಿತ್ರಗಳ ಬಳಕೆ

ಲೋಕಾಯುಕ್ತ ಎಸ್‌ಐಟಿಯಿಂದ ಹೊಸ ಪ್ರಯೋಗ

ವಿಜಯಕುಮಾರ್ ಸಿಗರನಹಳ್ಳಿ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉಪಗ್ರಹ ಸೆರೆ ಹಿಡಿಯುವ ಚಿತ್ರಗಳನ್ನು ಅಕ್ರಮ ಗಣಿಗಾರಿಗೆ ತನಿಖೆಗೆ ಬಳಸಿಕೊಳ್ಳಲು ಲೋಕಾಯುಕ್ತ ವಿಶೇಷ ತನಿಖಾ ತಂಡ(ಎಸ್‌ಐಟಿ)‌ ಮುಂದಾಗಿದೆ.

20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಉಪಗ್ರಹ ದೂರ ಸಂವೇದಿ ಚಿತ್ರಗಳನ್ನು (ಸ್ಯಾಟಲೈಟ್ ರಿಮೋಟ್‌ ಸೆನ್ಸಿಂಗ್ ಇಮೇಜ್) ಆಧರಿಸಿ ಎಷ್ಟು ಪ್ರಮಾಣದ ಅದಿರು ತೆಗೆಯಲಾಗಿದೆ ಎಂಬುದನ್ನು ವೈಜ್ಞಾನಿಕ ಲೆಕ್ಕಾಚಾರದಿಂದ ಪತ್ತೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಲು ಪ್ರಯತ್ನಿಸುತ್ತಿದೆ.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ್ದ ವರದಿ ಆಧರಿಸಿ 50 ಲಕ್ಷ ಟನ್‌ಗೂ ಕಡಿಮೆ ಅದಿರು ರಫ್ತಿಗೆ ಸಂಬಂಧಿಸಿದ 69 ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಈ ಪೈಕಿ 28 ಪ್ರಕರಣಗಳಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದೆ. 19 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ ಸಲ್ಲಿಕೆಯಾಗಿದ್ದು, ಉಳಿದ ಪ್ರಕರಣಗಳ ತನಿಖೆ ನಡೆಸುತ್ತಿದೆ.

ADVERTISEMENT

ವಿವಿಧ ಬಂದರುಗಳಿಂದ ಎಷ್ಟು ಪ್ರಮಾಣದ ಅದಿರು ಸಾಗಣೆಯಾಗಿದೆ ಎಂಬ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಆದರೆ, ಗಣಿ ಪ್ರದೇಶದಿಂದ ಎಷ್ಟು ಪ್ರಮಾಣದ ಅದಿರು ತೆಗೆಯಲಾಗಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಈ ಹೊಸ ಪ್ರಯತ್ನಕ್ಕೆ ಎಸ್‌ಐಟಿ ಕೈ ಹಾಕಿದೆ.

ಈ ಸಂಬಂಧ ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಕಂಪನಿ ಜೊತೆ ಎಸ್‌ಐಟಿ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿದ್ದು, ಉಪಗ್ರಹ ಚಿತ್ರಗಳನ್ನು ಆಧರಿಸಿ ವರದಿ ಸಿದ್ಧಪಡಿಸಿಕೊಡಲು ಕೋರಿದ್ದರು. ಆದರೆ, ಈ ಕೆಲಸಕ್ಕೆ ಕೋಟ್ಯಂತರ ರೂಪಾಯಿ ಶುಲ್ಕ ಕೊಡಬೇಕಾಗುತ್ತದೆ ಎಂದು ಕಂಪನಿ ವರದಿ ನೀಡಿದ ಬಳಿಕ ಪ್ರಸ್ತಾಪ ಕೈಬಿಡಲಾಗಿದೆ.

ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರದ(ಕೆಎಸ್‌ಆರ್‌ಎಸ್‌ಎಸಿ) ನೆರವು ಪಡೆದು   ಕಡಿಮೆ ಖರ್ಚಿನಲ್ಲಿ ‘ಸ್ಯಾಟಲೈಟ್ ರಿಮೋಟ್‌ ಸೆನ್ಸಿಂಗ್ ಇಮೇಜ್’ ವರದಿ ಪಡೆಯಲು ಪ್ರಯತ್ನ ಮುಂದುವರಿಸಲಾಗಿದೆ.

ಈ ವರದಿ ಬರಲು ಸಾಕಷ್ಟು ಕಾಲಾವಕಾಶ ಹಿಡಿಯಲಿದ್ದು, ಅಷ್ಟರೊಳಗೆ ಮಧ್ಯಂತರ ಆರೋಪ ಪಟ್ಟಿ ಸಲ್ಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
***
ಉಪಗ್ರಹ ಚಿತ್ರಗಳ ಬಳಕೆ ಹೇಗೆ:

ಗಣಿ ಪ್ರದೇಶದಲ್ಲಿ ಅದಿರು ತೆಗೆಯುವ ಮುನ್ನ ಉಪಗ್ರಹ ಸೆರೆ ಹಿಡಿದ ಚಿತ್ರ ಮತ್ತು ಅದಿರು ತೆಗೆದ ಬಳಿಕ ಸೆರೆ ಹಿಡಿದಿರುವ ಚಿತ್ರಗಳನ್ನು ಹೋಲಿಕೆ ಮಾಡಲಾಗುತ್ತದೆ.

ಅದಿರಿನಿಂದ ಬೇರ್ಪಡಿಸಿದ ಮಣ್ಣಿನ ಚಿತ್ರವೂ ಅಲ್ಲೇ ಸಿಗಲಿದೆ. ಎರಡನ್ನೂ ವೈಜ್ಞಾನಿಕವಾಗಿ ಲೆಕ್ಕಚಾರ ಮಾಡಿ ಇಂತಿಷ್ಟೇ ಪ್ರಮಾಣದ ಅದಿರು ತೆಗೆಯಲಾಗಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬಹುದಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.