ADVERTISEMENT

ಶೇ 30ರಷ್ಟು ವೇತನ ಹೆಚ್ಚಳಕ್ಕೆ ಆರನೇ ವೇತನ ಆಯೋಗ ಶಿಫಾರಸು

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 6:35 IST
Last Updated 31 ಜನವರಿ 2018, 6:35 IST
ಆರನೇ ವೇತನ ಆಯೋಗ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು.
ಆರನೇ ವೇತನ ಆಯೋಗ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು.   

ಬೆಂಗಳೂರು: ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ 30ರಷ್ಟು ಹೆಚ್ಚಿಸಲು ಆರನೇ ವೇತನ ಆಯೋಗ ಶಿಫಾರಸು ಮಾಡಿದೆ. ಇದರಿಂದ ಒಟ್ಟು 5.20 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ.

ಆರನೇ ವೇತನ ಆಯೋಗ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು.

ವೇತನ ಹೆಚ್ಚಳ ಶಿಫಾರಸು ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.

ADVERTISEMENT

ಕನಿಷ್ಠ ವೇತನ ₹ 17,000 ಮತ್ತು ಗರಿಷ್ಠ ವೇತನ ₹ 1,50,600 ನಿಗದಿಪಡಿಸುವಂತೆಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ₹ 8,500ರ ಕನಿಷ್ಠ ಪಿಂಚಣಿ ಮತ್ತು ₹ 75,300ರ ಗರಿಷ್ಠ ಪಿಂಚಣಿಗೂ ಶಿಫಾರಸು ಮಾಡಲಾಗಿದೆ. ಇದರಿಂದಾಗಿ ಈವರೆಗೆ ಡಿಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ ₹ 9,600 ಇನ್ನು ₹ 17,000ಕ್ಕೆ ಏರಿಕೆಯಾಗಲಿದೆ. ಶೇ 45.25ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಜತೆಗೆ ಶೇ 30ರ ಫಿಟ್ ಮೆಂಟ್ ನೌಕರರಿಗೆ ಸಿಗಲಿದೆ.

ಏಪ್ರಿಲ್‌ನಿಂದ ಪಾವತಿ: ಆಯೋಗದ ಶಿಫಾರಸಿನ ಪ್ರಕಾರ, ಪರಿಷ್ಕೃತ ದರವನ್ನು ಈ ವರ್ಷ ಏಪ್ರಿಲ್ 1ರಿಂದಲೇ ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ₹ 10,508 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇನ್ನಿತರ ಶಿಫಾರಸುಗಳು
* ಹಾಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನೂ 60 ವರ್ಷಗಳಿಗೆ ಮುಂದುವರಿಸಬೇಕು
* ಸ್ವಯಂ ನಿವೃತ್ತಿಗೆ ಕನಿಷ್ಠ ಸೇವಾ ಅರ್ಹತೆ ಮಿತಿ 15ರಿಂದ 10 ವರ್ಷಕ್ಕೆ ಇಳಿಕೆ
* ಪೂರ್ಣ ಪ್ರಮಾಣದ ಪಿಂಚಿಣಿ ಪಡೆಯಲು ಇರುವ ವಯಸ್ಸಿನ ಅರ್ಹತೆಯನ್ನು 33 ವರ್ಷಗಳಿಗೆ ಬದಲಾಗಿ 30 ವರ್ಷಗಳಿಗೆ ಇಳಿಕೆ
* ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕೃತ ಮೂಲ ವೇತನ ಆಧರಿಸಿ ಶೇ 24, ಶೇ 16 ಮತ್ತು ಶೇ 8ರಂತೆ ಪರಿಷ್ಕರಿಸಬೇಕು
* ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪ್ರಸಕ್ತ ಮೂಲ ಪಿಂಚಣಿಯ ಶೇ 30ರಷ್ಟು ಹೆಚ್ಚಳ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.