ADVERTISEMENT

ಕಾರ್ಯಾಚರಣೆ ಅಧಿಕಾರ ಕಮಿಷನರ್–ಎಸ್ಪಿಗಳಿಗೆ

ಐಎಸ್ಐ ಮುದ್ರೆ ಇಲ್ಲದ ಹೆಲ್ಮೆಟ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 5:55 IST
Last Updated 31 ಜನವರಿ 2018, 5:55 IST
ಕಾರ್ಯಾಚರಣೆ ಅಧಿಕಾರ ಕಮಿಷನರ್–ಎಸ್ಪಿಗಳಿಗೆ
ಕಾರ್ಯಾಚರಣೆ ಅಧಿಕಾರ ಕಮಿಷನರ್–ಎಸ್ಪಿಗಳಿಗೆ   

ಬೆಂಗಳೂರು: ಐಎಸ್‌ಐ ಗುರುತು ಇಲ್ಲದ ಹಾಗೂ ಕಳಪೆ ಹೆಲ್ಮೆಟ್‌ಗಳನ್ನು ನಿಷೇಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ಕಮಿಷನರ್/ಎಸ್ಪಿಗಳಿಗೆ ನೀಡಲಾಗಿದೆ.

ಕಳಪೆ ಹೆಲ್ಮೆಟ್‌ ವಿರುದ್ಧ ಮೊದಲ ಬಾರಿ ‘ಆಪರೇಷನ್ ಸೇಫ್‌ ರೈಡ್‌’ ಹೆಸರಿನಲ್ಲಿ ಮೈಸೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅದನ್ನು ಗಮನಿಸಿದ್ದ ಬೆಂಗಳೂರು ನಗರ ಪೊಲೀಸರು ಸಹ ಫೆ. 1ರಿಂದ ಅಂಥದ್ದೇ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದರು. ಕಳಪೆ ಹೆಲ್ಮೆಟ್‌ ಪತ್ತೆ ಕಷ್ಟವೆಂಬ ಕಾರಣ ನೀಡಿ ಅವರು ಇದೀಗ ಕಾರ್ಯಾಚರಣೆಯನ್ನೇ ಹಿಂಪಡೆದಿದ್ದಾರೆ.

ರಾಜ್ಯದ ಉಳಿದ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.‘ಐಎಸ್‌ಐ ಗುರುತಿನ ಗುಣಮಟ್ಟದ ಹೆಲ್ಮೆಟ್‌ ಧರಿಸಬೇಕೆಂದು ನಿಯಮ ಹೇಳುತ್ತದೆ. ಅದನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಲೇ ಇರುತ್ತೇವೆ’ ಎಂದು ರಸ್ತೆ ಸುರಕ್ಷತೆ ಮತ್ತು ಸಾರಿಗೆ ವಿಭಾಗದ ಆಯುಕ್ತ ಎಂ.ಎ.ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಳಪೆ ಹೆಲ್ಮೆಟ್‌ ವಿರುದ್ಧ ಕಾರ್ಯಾಚರಣೆ ನಡೆಸಿ ಎಂದು ಯಾರಿಗೂ ನಿಖರವಾಗಿ ಹೇಳಿಲ್ಲ. ಆ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಆಯಾ ಅಧಿಕಾರಿಗಳಿಗೆ ಇದೆ. ಹೀಗಾಗಿ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಯುವುದಿಲ್ಲವೆಂದು ಹೇಳಲಾಗದು’ ಎಂದರು.

ಬಿಐಎಸ್‌ ಪತ್ರ: ‘ಹೆಲ್ಮೆಟ್‌ಗಳನ್ನು ಸ್ಪರ್ಶಿಸಿ, ಕಣ್ಣಿನಿಂದ ನೋಡಿ ಗುಣಮಟ್ಟದ ಬಗ್ಗೆ ತೀರ್ಮಾನಿಸುವುದು ಅಸಾಧ್ಯ. ಪರೀಕ್ಷೆಗೆಂದೇ ಪ್ರತ್ಯೇಕ ವಿಧಾನಗಳಿವೆ. ರಸ್ತೆಯಲ್ಲಿ ಸವಾರರನ್ನು ಏಕಾಏಕಿ ತಡೆದು ಅವರ ಹೆಲ್ಮೆಟ್‌ ಕಳಪೆಯದ್ದು ಎಂದು ನಿಖರವಾಗಿ ಹೇಳಲು ಬರುವುದಿಲ್ಲ‘ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್‌) ಅಧಿಕಾರಿಗಳು, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌.ಹಿತೇಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.