ADVERTISEMENT

₹919 ಕೋಟಿ ವೆಚ್ಚ: 7 ಮಾರ್ಗ ವಿದ್ಯುದೀಕರಣ

2018-–19ರ ಕೇಂದ್ರ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹3,353 ಕೋಟಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 20:17 IST
Last Updated 6 ಫೆಬ್ರುವರಿ 2018, 20:17 IST
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ   

ಹುಬ್ಬಳ್ಳಿ: ಮೈಸೂರು–ಹಾಸನ– ಮಂಗಳೂರು ಸೇರಿದಂತೆ ರಾಜ್ಯದ 7 ರೈಲು ಮಾರ್ಗಗಳ ವಿದ್ಯುದೀಕರಣ ಯೋಜನೆಯನ್ನು ಈ ವರ್ಷ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ₹919 ಕೋಟಿ ಅನುದಾನ ಹಂಚಿಕೆಯಾಗಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ ಮಂಗಳವಾರ ಇಲ್ಲಿ ತಿಳಿಸಿದರು.

2018–19ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ಸಿಕ್ಕ ಅನುದಾನ ಮತ್ತು ಹೊಸ ಯೋಜನೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಬಾರಿ ₹3,353 ಕೋಟಿ ಅನುದಾನ ಹಂಚಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ 6ರಷ್ಟು ಹೆಚ್ಚು ಅನುದಾನ ದೊರೆತಿದೆ ಎಂದರು.

ಕೊಟುಮುಚಗಿ ಮಾರ್ಗವಾಗಿ ಗದಗ –ಕೃಷ್ಣನಗರ, ನರೇಗಲ್‌, ಗಜೇಂದ್ರಗಡ, ಹನುಮಸಾಗರ, ಇಲಕಲ್‌ ಮತ್ತು ಲಿಂಗಸಗೂರು ವ್ಯಾಪ್ತಿಯಲ್ಲಿ 216 ಕಿ.ಮೀ. ಹೊಸ ಮಾರ್ಗಸಮೀಕ್ಷೆಗೆ ಹಸಿರು ನಿಶಾನೆ ಸಿಕ್ಕಿದ್ದು, ₹54 ಲಕ್ಷ ನೀಡಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಹುಬ್ಬಳ್ಳಿ–ಅಂಕೋಲ ಮಾರ್ಗ: ಹುಬ್ಬಳ್ಳಿ– ಅಂಕೋಲದ 167 ಕಿ.ಮೀ. ಹೊಸಮಾರ್ಗಕ್ಕಾಗಿ ₹20 ಲಕ್ಷ ಅನುದಾನ ನೀಡಲಾಗಿದೆ. ಈ ಬಗ್ಗೆ ರೈಲ್ವೆ ಸಚಿವಾಲಯದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅಶೋಕ ಗುಪ್ತಾ ತಿಳಿಸಿದರು.

ಸ್ವಚ್ಛತೆಗೆ ಆದ್ಯತೆ: ಸ್ವಚ್ಛ ಭಾರತ ಅಭಿಯಾನದಡಿ ರೈಲ್ವೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಜೈವಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.

‘ಜೈವಿಕ ಶೌಚಾಲಯದ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅದರಲ್ಲಿ ಯಾವುದೇ ವಸ್ತುಗಳನ್ನು ಹಾಕದಂತೆ, ರೈಲುಗಳಲ್ಲಿ ಭಿತ್ತಿಪತ್ರಗಳನ್ನು ಹಚ್ಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಯಾಣಿಕರಲ್ಲಿಯೂ ಈ ಬಗ್ಗೆ ಅರಿವು ಮೂಡಬೇಕು’ ಎಂದರು.

‘ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಮೇಲ್ಸೇತುವೆ ನಿರ್ಮಿಸಲು, ಪ್ಲಾಟ್‌ಫಾರಂಗಳ ಅಭಿವೃದ್ಧಿಗೆ ₹400 ಕೋಟಿ ಅನುದಾನ ದೊರೆತಿದೆ. ಸಿಗ್ನಲ್ಲಿಂಗ್‌ ಹಾಗೂ ದೂರವಾಣಿ ಸಂವಹನಕ್ಕಾಗಿ ₹39 ಕೋಟಿ ಹಂಚಿಕೆಯಾಗಿದೆ’ ಎಂದು ಗುಪ್ತಾ ಹೇಳಿದರು.

ರೈಲ್ವೆ ಅಭಿವೃದ್ಧಿಯಲ್ಲಿ ಸೌರಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ಮಾರ್ಚ್‌ ವೇಳೆಗೆ, ಎಲ್ಲ ರೈಲು ನಿಲ್ದಾಣಗಳಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ತಿಂಗಳಾಂತ್ಯದಲ್ಲಿ ಸಂಚಾರ: ಬೆಂಗಳೂರು –ಮೈಸೂರು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತಿಂಗಳಾಂತ್ಯದಲ್ಲಿ (ಫೆಬ್ರುವರಿ) ವಿದ್ಯುತ್‌ ರೈಲು ಸಂಚಾರ ಆರಂಭವಾಗಲಿದೆ. ಲೊಕೊ ಪೈಲಟ್‌ಗಳಿಗೆ ತರಬೇತಿ ನೀಡುತ್ತಿರುವ ಕಾರಣ ರೈಲು ಸಂಚಾರ ವಿಳಂಬವಾಗಿತ್ತು ಎಂದು ಅಶೋಕ ಗುಪ್ತಾ ಹೇಳಿದರು.

ಸಿಬ್ಬಂದಿ ಕೊರತೆ ಹಾಗೂ ಲೆವೆಲ್‌ ಕ್ರಾಸಿಂಗ್‌ಗಳು ಹೆಚ್ಚಾಗಿರುವ ಕಾರಣ, ಬಳ್ಳಾರಿ–ಕೊಟ್ಟೂರು ನಡುವೆ ರೈಲು ಸಂಚಾರ ತಡವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

**

ತಿಂಗಳಾಂತ್ಯದಲ್ಲಿ ವಿದ್ಯುತ್‌ ರೈಲು ಸಂಚಾರ

ಬೆಂಗಳೂರು–ಮೈಸೂರು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತಿಂಗಳಾಂತ್ಯದಲ್ಲಿ (ಫೆಬ್ರುವರಿ) ವಿದ್ಯುತ್‌ ರೈಲು ಸಂಚಾರ ಆರಂಭವಾಗಲಿದೆ. ಲೊಕೊ ಪೈಲಟ್‌ಗಳಿಗೆ ತರಬೇತಿ ನೀಡುತ್ತಿರುವ ಕಾರಣ ರೈಲು ಸಂಚಾರ ವಿಳಂಬವಾಗಿತ್ತು ಎಂದು ಅಶೋಕ ಗುಪ್ತಾ ಹೇಳಿದರು.

ಸಿಬ್ಬಂದಿ ಕೊರತೆ ಹಾಗೂ ಲೆವೆಲ್‌ ಕ್ರಾಸಿಂಗ್‌ಗಳು ಹೆಚ್ಚಾಗಿರುವ ಕಾರಣ, ಬಳ್ಳಾರಿ–ಕೊಟ್ಟೂರು ನಡುವೆ ರೈಲು ಸಂಚಾರ ತಡವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.