ADVERTISEMENT

‘ಅಘನಾಶಿನಿ’ಗೆ ಅಂತರರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
‘ಅಘನಾಶಿನಿ’ಗೆ ಅಂತರರಾಷ್ಟ್ರೀಯ ಪ್ರಶಸ್ತಿ
‘ಅಘನಾಶಿನಿ’ಗೆ ಅಂತರರಾಷ್ಟ್ರೀಯ ಪ್ರಶಸ್ತಿ   

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಅಘನಾಶಿನಿ ನದಿಯ ಒಡಲಾಳವನ್ನು ತೆರೆದಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರ ಅಮೆರಿಕದ ಕೊಲೊರಾಡೊ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್‌ನ ಎಕ್ಸಲೆನ್ಸ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

‘ಕೊಲೊರಾಡೊ ಪರಿಸರ ಚಲನಚಿತ್ರೋತ್ಸವದಲ್ಲಿ ಫೆ.24ರಂದು ಈ ಸಾಕ್ಷ್ಯಚಿತ್ರದ ಪ್ರದರ್ಶನವಿದೆ. ಎಂಜಿನಿಯರ್ ಅಶ್ವಿನಿಕುಮಾರ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ 40 ನಿಮಿಷಗಳ ಸಾಕ್ಷ್ಯಚಿತ್ರವನ್ನು ಎರಡೂವರೆ ವರ್ಷಗಳ ಅವಧಿಯಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಲ್ಯಾಂಡ್‌ಸ್ಕೇಪ್ ವಿಝಾರ್ಡ್ಸ್‌ ಸಂಸ್ಥೆಯ ಸಹನಾ ಬಾಳ್ಕಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಸರ ಮತ್ತು ಜನಜೀವನ ನದಿಯೊಂದಿಗೆ ಹೊಂದಿರುವ ಸಂಬಂಧವನ್ನು ನವಿರಾಗಿ ಕಟ್ಟಿಕೊಡುವ ಈ ಕಿರುಚಿತ್ರ ನದಿಯ ನಿರೂಪಣೆಯಲ್ಲೇ ಮೂಡಿರುವುದು ಇನ್ನಷ್ಟು ಪರಿಣಾಮಕಾರಿಯಾಗಿದೆ’ ಎಂದು ವಿವರಿಸಿದರು.

ADVERTISEMENT

ಹಾಲಿವುಡ್ ಅಂತರರಾಷ್ಟ್ರೀಯ ಸ್ವತಂತ್ರ ಸಾಕ್ಷ್ಯಚಿತ್ರ ಪ್ರಶಸ್ತಿ, ಅಮೆರಿಕದ ಜಾರ್ಜಿಯಾ ಸ್ಪಾಟ್ ಲೈಟ್ ಡಾಕ್ ಗೋಲ್ಡ್ ಅವಾರ್ಡ್‌, ಇಸ್ರೇಲ್ ನಜರೆತ್ ಫಿಲ್ಮ್ ಫೆಸ್ಟಿವಲ್‌ನ ಫೈನಲಿಸ್ಟ್‌ಗೆ ಆಯ್ಕೆಯಾಗಿರುವುದಲ್ಲದೇ, ಕಾಂಬೋಡಿಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೂವಿಂಗ್ ವಾಟರ್ ಫಿಲ್ಮ್ ಫೆಸ್ಟಿವಲ್ ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು ಒಂಬತ್ತು ಪ್ರಶಸ್ತಿಗಳಿಗೆ ಭಾಜನವಾಗಿದೆ.

‘ಲ್ಯಾಂಡ್‌ಸ್ಕೇಪ್ ವಿಝಾರ್ಡ್ಸ್‌ ಸಂಸ್ಥೆಯು ಕ್ರೌಡ್ ಫಂಡಿಂಗ್ ಮತ್ತು ರೋಹಿಣಿ ನಿಲೇಕಣಿ ಫಿಲಾಂಥ್ರೊಪಿಸ್‌ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಸಾಕ್ಷ್ಯಚಿತ್ರವು ನದಿ ಕಣಿವೆಯ ದೇವರ ಕಾಡು, ರಾಮಪತ್ರೆ ಜಡ್ಡಿ, ಸಿಂಗಳಿಕ ಪ್ರಪಂಚ, ಹೊಳೆಯುವ ಶಿಲೀಂದ್ರ, ಲವಣಯುಕ್ತ ನೀರಿನಲ್ಲಿ ಬೆಳೆಯುವ ಕಗ್ಗ ಭತ್ತ, ಅಳಿವೆಯ ಬಳಚಿನ ಶ್ರೀಮಂತಿಕೆ, ಜಗತ್ತಿನಲ್ಲಿ ಕೆಲವೇ ಸ್ಥಳಗಳಲ್ಲಿ ಸಂಭವಿಸುವ ಚಂದ್ರಧನುಷ್‌ನ ಸೌಂದರ್ಯವನ್ನು ಕಟ್ಟಿಕೊಡುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.