ADVERTISEMENT

ಕಡಲೆ ಖರೀದಿ ಮಿತಿ ಹೆಚ್ಚಳಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

ಬೆಂಗಳೂರು: ರಾಜ್ಯದ ರೈತರಿಂದ ‌ ಕನಿಷ್ಠ 40ಲಕ್ಷ ಕ್ವಿಂಟಲ್‍ ಕಡಲೆ ಖರೀದಿಸುವಂತೆ ಆಗ್ರಹಿಸಿ ತಕ್ಷಣ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ವಿಧಾನಸಭೆಯಲ್ಲಿ ಕಡಲೆ ಖರೀದಿ ವಿಷಯವನ್ನು ಗುರುವಾರ ಪ್ರಸ್ತಾವಿಸಿದಾಗ, ‘ರಾಜ್ಯದಲ್ಲಿ 33 ಲಕ್ಷ ಹೆಕ್ಟೇರ್‍ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಅಂದಾಜು 90 ಲಕ್ಷ ಕ್ವಿಂಟಲ್ ಉತ್ಪಾದನೆಯಾಗಿದೆ. ರೈತರಿಗೆ ನೆರವಾಗಲು ಖರೀದಿ ಗುರಿ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವರಿಕೆ ಮಾಡಲಾಗುವುದು’ ಎಂದರು.

ಖರೀದಿಗೆ ಈ ತಿಂಗಳ 23ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ವಿಕೇಂದ್ರೀಕೃತ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ ಎಂದೂ ಸಚಿವರು ತಿಳಿಸಿದರು.

ADVERTISEMENT

ಪ್ರತಿ ರೈತರಿಂದ ಹತ್ತು ಕ್ವಿಂಟಲ್ ಕಡಲೆ ಖರೀದಿ ನಿಯಮ ಸಡಿಲಿಸುವಂತೆ ಮತ್ತು ಪಹಣಿಯಲ್ಲಿ ‘ಕಡಲೆ’ ಎಂದು ಕಡ್ಡಾಯವಾಗಿ ನಮೂದಾಗಿರಬೇಕು ಎಂಬ ನಿಯಮ ಸಡಿಲಿಸಲಾಗುವುದು ಎಂದೂ ವಿವರಿಸಿದರು.

ರೈತರ ಬ್ಯಾಂಕ್ ಖಾತೆಗೆ ಕಡಲೆ ಖರೀದಿ ಹಣ ಜಮೆ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ. ಬ್ಯಾಂಕ್ ಖಾತೆಗೆ ಜಮೆಯಾಗುವ ಹಣವನ್ನು ಸಾಲದ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡುವಂತೆ ಆರ್‌ಬಿಐಗೆ ಮನವಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.