ADVERTISEMENT

ಖಾಸಗಿ ವಿವಿ ಸ್ಥಾಪನೆ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST

ಬೆಂಗಳೂರು: ಕರ್ನಾಟಕ ಮರಗಳ ಸಂರಕ್ಷಣೆ (ತಿದ್ದುಪಡಿ) ಮತ್ತು ಎರಡು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಸೇರಿ ಮೂರು ಮಸೂದೆಗಳನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸೊಸೈಟಿ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಖಾಸಗಿ ವಿಶ್ವವಿದ್ಯಾಲಯದ ಮಾನ್ಯತೆ ನೀಡುವ ಸಂಬಂಧ ಮಸೂದೆ ಮಂಡಿಸಲಾಗಿದೆ. ಈ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನ ಧಾರವಾಡದಲ್ಲಿ ಇರಲಿದ್ದು, ವಿ.ವಿ ಸ್ಥಾಪನೆ ಐದು ವರ್ಷಗಳ ಬಳಿಕ ರಾಜ್ಯದ ಯಾವುದೇ ಭಾಗದಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಮತ್ತು ಅಧ್ಯಯನ ಕೇಂದ್ರಗಳನ್ನು ‌ಆರಂಭಿಸಲು ಮಸೂದೆ ಅವಕಾಶ ಕಲ್ಪಿಸಲಿದೆ.

ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ: ಕಲಬುರ್ಗಿ ಕೇಂದ್ರವಾಗಿ ಖಾಜಾ ಬಂದಾನವಾಜ್ ಶಿಕ್ಷಣ ಸಂಘ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅವಕಾಶ ನೀಡಿ ಮಸೂದೆ ಮಂಡಿಸಲಾಯಿತು. ಮಸೂದೆ ಅಂಗೀಕಾರಗೊಂಡ ಬಳಿಕ ಹೆಚ್ಚುವರಿ ಕ್ಯಾಂಪಸ್‍ಗಳು, ಪ್ರಾದೇಶಿಕ ಕೇಂದ್ರಗಳು, ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಈ ವಿ.ವಿ ಅಧಿಕಾರ ಹೊಂದಲಿದೆ.

ADVERTISEMENT

ಮರಗಳ ಸಂರಕ್ಷಣೆ (ತಿದ್ದುಪಡಿ) ಮಸೂದೆ:ರೈತರು ಬೆಳೆಯುವ ಕೆಲವು ಮರಗಳ ಪ್ರಬೇಧಗಳನ್ನು ಅನುಮತಿ ಪಡೆದು ಕಡಿಯುವುದಕ್ಕೆ ವಿನಾಯಿತಿ ನೀಡುವ ಉದ್ದೇಶದಿಂದ ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ (ತಿದ್ದುಪಡಿ) ಮಸೂದೆ ಮಂಡಿಸಲಾಗಿದೆ. ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ 1976ಕ್ಕೆ ತಿದ್ದುಪಡಿ ತರುವ ಮೂಲಕ ಅಡಿಕೆ, ಅಕೇಶಿಯಾ ಪ್ರಬೇಧಗಳು, ದೊಡ್ಡ ಬೇವು, ಬಾಗೇಕಾಯಿ ಮರ, ಗೋಡಂಬಿ, ಕ್ರಿಸ್‍ಮಸ್ ಟ್ರೀ, ನಿಂಬೆ, ಕಿತ್ತಲೆ, ತೆಂಗು, ಕಾಫಿ, ಮೇ-ಪ್ಲವರ್ ಮತ್ತಿತರ ಕೆಲವು ಜಾತಿಯ ಮರಗಳನ್ನು ಕಡಿಯಲು ಅನುಮತಿ ಪಡೆಯುವ ಅಗತ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.