ADVERTISEMENT

ನೀಟ್‌: ಮೇ 6 ಕ್ಕೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:08 IST
Last Updated 9 ಫೆಬ್ರುವರಿ 2018, 20:08 IST
ನೀಟ್‌: ಮೇ 6 ಕ್ಕೆ ಪರೀಕ್ಷೆ
ನೀಟ್‌: ಮೇ 6 ಕ್ಕೆ ಪರೀಕ್ಷೆ   

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೇ 6ರಂದು ನಡೆಯಲಿದೆ.

ವಿದ್ಯಾರ್ಥಿಗಳ ನೋಂದಣಿಯನ್ನು ಗುರುವಾರ ರಾತ್ರಿಯಿಂದಲೇ ಆರಂಭಿಸಲಾಗಿದೆ. ಆನ್‌ಲೈನ್‌ ನೋಂದಣಿಗೆ ಮಾರ್ಚ್‌ 9ರಂದು ರಾತ್ರಿ 11.30ರವರೆಗೆ ಅವಕಾಶ ಇದೆ. ವಿದೇಶಿ ವಿದ್ಯಾರ್ಥಿಗಳೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕರ್ನಾಟಕ ಪದವಿ ಪೂರ್ವ ಪರೀಕ್ಷಾ ಮಂಡಳಿ ಸೇರಿದಂತೆ ಸರ್ಕಾರದಿಂದ ಮಾನ್ಯತೆ ಪಡೆದ ಎಲ್ಲ ಪ್ರೌಢ ಶಿಕ್ಷಣ ಮಂಡಳಿಯ 12ನೇ ತರಗತಿ ಪರೀಕ್ಷೆ ಉತ್ತೀರ್ಣರಾಗಿರುವವರಿಗೆ ಪರೀಕ್ಷೆ ಬರೆಯಲು ಅರ್ಹತೆ ಇದೆ. ಖಾಸಗಿಯಾಗಿ 12ನೇ ತರಗತಿ ಪರೀಕ್ಷೆ ಉತ್ತೀರ್ಣರಾದವರಿಗೆ, ರಾಷ್ಟ್ರೀಯ ಮುಕ್ತ ಕಲಿಕಾ ಸಂಸ್ಥೆ (ಎನ್‌ಐಒಎಸ್‌) ಅಥವಾ ಇತರ ಮುಕ್ತ ಶಾಲೆಗಳಲ್ಲಿ 12ನೇ ತರಗತಿ ಉತ್ತೀರ್ಣರಾದವರಿಗೆ ನೀಟ್‌ ಬರೆಯಲು ಅರ್ಹತೆ ಇಲ್ಲ.

ADVERTISEMENT

ಹಾಗೆಯೇ, 10+2 ತರಗತಿಗಳಲ್ಲಿ ಜೀವಶಾಸ್ತ್ರ ಅಥವಾ ಜೈವಿಕ ತಂತ್ರಜ್ಞಾನವನ್ನು ಹೆಚ್ಚುವರಿ ವಿಷಯವಾಗಿ ಕಲಿತವರಿಗೂ ಈ ಪರೀಕ್ಷೆ ಬರೆಯಲು ಅವಕಾಶ ಇಲ್ಲ.

ಮುಕ್ತ ಶಾಲೆಗಳ ವಿದ್ಯಾರ್ಥಿಗಳು ಔಪಚಾರಿಕ ಶಾಲಾ ವಿದ್ಯಾರ್ಥಿಗಳಿಗೆ ಸಮಾನ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣ ನೀಡಿ ನೀಟ್‌ಗೆ ಅವಕಾಶ ನೀಡದಿರಲು ಭಾರತೀಯ ವೈದ್ಯಕೀಯ ಪರಿಷತ್‌ ನಿರ್ಧರಿಸಿತ್ತು. ಆದರೆ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಎನ್‌ಐಒಎಸ್‌ ಮನವಿ ಸಲ್ಲಿಸಿತ್ತು. ಈ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಚರ್ಚೆಯೂ ನಡೆದಿತ್ತು. ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.

ಪರೀಕ್ಷೆಯ ಅವಧಿ ಮೂರು ತಾಸು. ಪರೀಕ್ಷೆಯನ್ನು ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣ ನಡೆಸಲಾಗುವುದು. ಪರೀಕ್ಷೆ ಬರೆಯುವಾಗ ಅಭ್ಯರ್ಥಿಗಳು ಕ್ಯಾಮೆರಾಕ್ಕೆ ಮುಖ ಸರಿಯಾಗಿ ಕಾಣಿಸುವಂತೆ ಕುಳಿತುಕೊಳ್ಳಬೇಕು ಎಂದು ಸಿಬಿಎಸ್‌ಇ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.