ADVERTISEMENT

ರಾಜ್ಯದ ಎಲ್ಲ ಸ್ಲಂಗಳಲ್ಲೂ ವಾಸ್ತವ್ಯ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST
ಮುನಿರತ್ನಂ ತಾಯಿ ಇಂದ್ರಾಣಿ ನೀಡಿದ ಊಟವನ್ನು ಯಡಿಯೂರಪ್ಪ ಸವಿದರು. ಮುನಿರತ್ನಂ, ಪಿ.ಸಿ. ಮೋಹನ್‌, ಮುರುಳೀಧರರಾವ್‌ ಇದ್ದರು  –ಪ್ರಜಾವಾಣಿ ಚಿತ್ರ
ಮುನಿರತ್ನಂ ತಾಯಿ ಇಂದ್ರಾಣಿ ನೀಡಿದ ಊಟವನ್ನು ಯಡಿಯೂರಪ್ಪ ಸವಿದರು. ಮುನಿರತ್ನಂ, ಪಿ.ಸಿ. ಮೋಹನ್‌, ಮುರುಳೀಧರರಾವ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊಳೆಗೇರಿ ಜನರ ಜತೆ ಬೆರೆತು, ಅವರ ಸಮಸ್ಯೆ ಅರಿಯುವ ಆಶಯದಿಂದ ಬಿಜೆಪಿ ಹಮ್ಮಿಕೊಂಡಿರುವ ‘ಸ್ಲಂ ವಾಸ್ತವ್ಯ’ದ ಅಂಗವಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರರಾವ್‌, ಸಂಸದ ಪಿ.ಸಿ. ಮೋಹನ್ ಇಲ್ಲಿನ ಲಕ್ಷ್ಮಣ ಪುರಿ ಕೊಳೆಗೇರಿ ನಿವಾಸಿ, ಆಟೋ ಚಾಲಕ ಮುನಿರತ್ನಂ ಮನೆಯಲ್ಲಿ ಶನಿವಾರ ರಾತ್ರಿ ಉಳಿದುಕೊಂಡರು.

ಮುನಿರತ್ನಂ ಮನೆಯ ಅಕ್ಕಪಕ್ಕದ ಪ್ರದೇಶಗಳಲ್ಲಿ ರಂಗೋಲಿ ಬಿಡಿಸಿ, ಮಾವಿನ ತೋರಣ ಹಾಗೂ ಬಾಳೆ ಗಿಡಗಳನ್ನು ಕಟ್ಟಿ ಸಿಂಗರಿಸಲಾಗಿತ್ತು.

ರಾತ್ರಿ 8.30ರ ಸುಮಾರಿಗೆ ಈ ಪ್ರದೇಶಕ್ಕೆ ಬಂದ ನಾಯಕರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ, ಆರತಿ ಬೆಳಗಿದರು. ಮಾರಿಯಮ್ಮನ್‌ ದೇವಸ್ಥಾನಕ್ಕೆ ಭೇಟಿ ನೀಡಿದ ಯಡಿಯೂರಪ್ಪ ದೇವರ ದರ್ಶನ ಪಡೆದರು. ಬಳಿಕ ಸಂತ ಮೇರಿ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮುನಿರತ್ನಂ ಮನೆಗೆ ತೆರಳಿದರು.

ADVERTISEMENT

ಕುಟುಂಬದವರ ಜತೆ ಕುಳಿತು ರಾತ್ರಿಯ ಊಟ ಸವಿದರು. ಚಪಾತಿ, ಆಲೂಗೆಡ್ಡೆ ಪಲ್ಯ, ಅನ್ನ ಮತ್ತು ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಹಾರಕ್ಕೆ ಇಡ್ಲಿ, ವಡೆ, ಉಪ್ಪಿಟ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಮುನಿರತ್ನಂ ತಿಳಿಸಿದರು.

ಎಲ್ಲ ಕೊಳೆಗೇರಿಗಳಲ್ಲಿ ವಾಸ್ತವ್ಯ: ‘ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲ ಕೊಳೆಗೇರಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಕುಡಿಯುವ ನೀರು, ಮನೆ, ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯ ಕೊರತೆಯಿಂದ ನರಳುತ್ತಿರುವ ಇವುಗಳ ಪರಿಸ್ಥಿತಿಯನ್ನು ಖುದ್ದಾಗಿ ಅರಿಯುವುದು ‘ಸ್ಲಂ ವಾಸ್ತವ್ಯ’ದ ಉದ್ದೇಶ’ ಎಂದು ಯಡಿಯೂರಪ್ಪ, ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ, ‘ರಾತ್ರಿ ಒಂದು ಮನೆಯಲ್ಲಿ ಮಲಗಿ, ಅವರು ಪಡಿಪಾಟಲುಗಳನ್ನು ಅರಿಯಲಿದ್ದೇನೆ. ಮಾರನೆ ದಿನ ಬೆಳಿಗ್ಗೆ ಅಲ್ಲಿಯೇ ವಾಯುವಿಹಾರ ಮಾಡಿ, ಪ್ರತಿಯೊಬ್ಬರನ್ನೂ ಭೇಟಿ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.