ADVERTISEMENT

ಮೌಲ್ಯ ಪಸರಿಸುವ ವಾಹಕ ಆರ್‌ಎಸ್‌ಎಸ್‌: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ರಾಮ್‌ ಮಾಧವ್
ರಾಮ್‌ ಮಾಧವ್   

ಬೆಂಗಳೂರು: ’ನಮ್ಮದು ಮೌಲ್ಯಾಧಾರಿತ ಆಲೋಚನಾ ಪದ್ಧತಿ. ಅದನ್ನು ಭವಿಷ್ಯದ ಪೀಳಿಗೆಗೆ ವರ್ಗಾಯಿಸುವ ವಾಹಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಹೇಳಿದರು.

‘ಎ ಟಾಕ್‌ ಆನ್ ಇಂಟಿಗ್ರಲ್‌ ಥಾಟ್‌’ ವಿಷಯದ ಮೇಲೆ ಭಾನುವಾರ ಉಪನ್ಯಾಸ ನೀಡಿದ ಅವರು, ‘ಭಾರತೀಯ (ಇಂಡಿಕ್) ಆಲೋಚನೆಗಳು ಒಳನೋಟಗಳನ್ನು ಹೊಂದಿದೆ. ಇದನ್ನು ಸಮಾಜದಲ್ಲಿ ಪಸರಿಸುವ ಕೆಲಸವನ್ನು ಆರ್‌ಎಸ್ಎಸ್‌ ಮಾಡುತ್ತಿದೆ’ ಎಂದರು.

‘ಮಾನವೀಯತೆ ತುಂಬಿಕೊಂಡಿರುವ ಈ ಆಲೋಚನಾ ಪದ್ಧತಿ ಸಾರ್ವತ್ರಿಕವಾದುದು. ಆರ್‌ಎಸ್‌ಎಸ್‌ ಒಂದೇ ಅಲ್ಲ, ಇನ್ನೂ ಹಲವರು ಈ ರೀತಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶದ ನೆಲದಲ್ಲಿ ಹುಟ್ಟಿದ ಈ ಆಲೋಚನಾ ಪದ್ಧತಿಗೆ ಎಲ್ಲರೂ ಗೌರವ ಕೊಡಬೇಕು’ ಎಂದರು.

ADVERTISEMENT

‘ಭಾರತೀಯತೆ ಈ ನೆಲದ ನಾಗರಿಕ ಸಮಾಜದ ಉತ್ಪನ್ನ. ಅನೇಕರು ಆರ್‌ಎಸ್‌ಎಸ್‌ ಒಂದು ಸಂಘಟನೆ ಎಂದು ಸೀಮಿತಗೊಳಿಸಿದ್ದಾರೆ. ಸಂಘಟನೆಗಳು ಒಂದು ಚೌಕಟ್ಟಿನ ಒಳಗೆ ಕೆಲಸ ಮಾಡುತ್ತವೆ. ಆದರೆ, ಆರ್‌ಎಸ್‌ಎಸ್‌ಗೆ ಆ ಚೌಕಟ್ಟು ಇಲ್ಲ’ ಎಂದರು.

‘ಭಾರತೀಯ ಅಸ್ಮಿತೆ ರಾಜಕೀಯವೂ ಅಲ್ಲ, ಚಾರಿತ್ರಿಕವೂ ಅಲ್ಲ. ಮೌಲ್ಯವನ್ನು ಆಧರಿಸಿದ್ದು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ರಾಮರಾಜ್ಯ ನಮ್ಮೆಲ್ಲರ ಕನಸು. ಅದನ್ನು ನನಸಾಗಿಸಲು ಪ್ರತಿಯೊಬ್ಬರ ಪಾಲುದಾರಿಕೆ ಬೇಕು’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಮಧ್ಯೆ ಭಿನ್ನಾಭಿಪ್ರಾಯಗಳಿವೆ, ಸಂಘರ್ಷಗಳಿವೆ, ಆದರೂ ಸಹಬಾಳ್ವೆ ನಡೆಸುತ್ತೇವೆ. ಅದೇ ಜಾತ್ಯತೀತ ಗುಣಲಕ್ಷಣ. ನಾವು ಮಹಿಳೆಯರಿಗೆ ರಕ್ಷಣೆ ನೀಡುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತೇವೆ. ಅದೇ ವೇಳೆ ಆಕೆಗೆ ಗೌರವ ನೀಡುವ ಬಗ್ಗೆಯೂ ಚಿಂತಿಸಬೇಕಿದೆ. ಸಮಾಜದ ಆಲೋಚನೆಗಳು ಬದಲಾಗಬೇಕು. ಮಹಿಳೆಯರು ಮಧ್ಯರಾತ್ರಿಯಲ್ಲಿ ಬೀದಿಯಲ್ಲಿ ನಿಂತು ಮಾತನಾಡಲು ಆರಂಭಿಸಿದರೆ ನಾವು ಸ್ವತಂತ್ರಗೊಂಡಂತೆ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು’ ಎಂದು ಅವರು ನೆನಪಿಸಿದರು.

‘ಭಯೋತ್ಪಾದನೆ ನಾವು ಎದುರಿಸಬೇಕಾದ ಒಂದು ರೋಗ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತೀಯ ಸಮಾಜ ಒಗ್ಗಟ್ಟಿನಿಂದ ಹೋರಾಡಬೇಕಿದೆ’ ಎಂದರು.

ಮುಖ್ಯಾಂಶಗಳು

* ರಾಮರಾಜ್ಯ ನಮ್ಮೆಲ್ಲರ ಕನಸು

* ಸಮಾಜದ ಆಲೋಚನೆ ಬದಲಾಗಲಿ

* ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ ಅವಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.