ADVERTISEMENT

ಈ‌ ನೆಲದ ಬೊಗಸೆ ಮಣ್ಣು ಪುಟ್ಟಣಯ್ಯ ಅಂತ್ಯಕ್ರಿಯೆಗೆ: ಚಿತ್ರದುರ್ಗ ಜಿಲ್ಲಾ ರೈತರ ಭಾವುಕ ನುಡಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 10:28 IST
Last Updated 19 ಫೆಬ್ರುವರಿ 2018, 10:28 IST
ಚಿತ್ರದುರ್ಗದ ಎಪಿಎಂಸಿ ರೈತಭವನದಲ್ಲಿ ನಡೆದ ಕೆ.ಎಸ್ ಪುಟ್ಟಣ್ಣಯ್ಯನವರ ಶ್ರದ್ಧಾಂಜಲಿ ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ ನೆನಪುಗಳನ್ನು ಹಂಚಿಕೊಂಡರು.
ಚಿತ್ರದುರ್ಗದ ಎಪಿಎಂಸಿ ರೈತಭವನದಲ್ಲಿ ನಡೆದ ಕೆ.ಎಸ್ ಪುಟ್ಟಣ್ಣಯ್ಯನವರ ಶ್ರದ್ಧಾಂಜಲಿ ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ ನೆನಪುಗಳನ್ನು ಹಂಚಿಕೊಂಡರು.   

ಚಿತ್ರದುರ್ಗ: ಈ ನೆಲದ ಒಂದು ಬೊಗಸೆ ಮಣ್ಣಿನೊಂದಿಗೆ ರೈತ ನಾಯಕ ಪುಟ್ಟಣ್ಣಯ್ಯನವರ ಅಂತ್ಯಕ್ರಿಯೆಗೆ ತೆರಳುತ್ತೇವೆ. ಅಂತ್ಯಕ್ರಿಯೆಯಲ್ಲಿ ನಮ್ಮ ನೆಲದ‌ ಮಣ್ಣನ್ನು ಅವರಿಗೆ ಅರ್ಪಿಸುತ್ತೇವೆ' ಎಂದು ಜಿಲ್ಲೆಯ ರೈತ ಮುಖಂಡರು ಭಾವುಕರಾಗಿ ನುಡಿದರು.

ಭಾನುವಾರ ನಿಧನರಾದ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ‌ಸಲ್ಲಿಸಲು ಸೋಮವಾರ ಇಲ್ಲಿನ‌ ರೈತಭವನದಲ್ಲಿ ಕರೆದಿದ್ದ ಸಭೆಯಲ್ಲಿ ಬಹುತೇಕ ರೈತ ಮುಂಖಡರು ದುಃಖತಪ್ತರಾಗಿ, ಗದ್ಗದಿತ ಕಂಠದೊಂದಿಗೆ ಪುಟ್ಟಣ್ಣಯ್ಯ ಅವರೊಂದಿಗಿನ ಚಿತ್ರದುರ್ಗದ ನಂಟನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.

ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ನುಲೇನೂರು ಶಂಕ್ರಪ್ಪ, ರೈತ ಮುಖಂಡರಾದ ನಾಗಣ್ಣ, ಮತ್ತಿತರು ಕಣ್ಣೀರಿಡುತ್ತಲೇ ಅವರೊಂದಿಗಿನ ನೆನಪು ಹಂಚಿಕೊಂಡರು.‌

ADVERTISEMENT

ಪಾಳು ಕಟ್ಟಡದಂತಾಗಿರುವ ರೈತ ಭವನವನ್ನು ಶ್ರದ್ಧಾಂಜಲಿ ಕಾರ್ಯಕ್ರಮಕ್ಕಾಗಿ ಸ್ವಚ್ಛಗೊಳಿಸಿದ್ದ ರೈತ ಮುಖಂಡರು, 'ಈ ಭವನ ಇನ್ನು ಮುಂದೆ ಪುಟ್ಟಣ್ಣಯ್ಯ ಭವನವಾಗಬೇಕು. ಎಲ್ಮ ರೈತರಿಗೂ ಕಾರ್ಯಕ್ರಮ ನಡೆಸಲು ಅನುಕೂಲವಾಗಬೇಕು‌ ಆ ಮೂಲಕ ಪುಟ್ಟಣ್ಣಯ್ಯನವರು ಸದಾ ರೈತ ಚಟುವಟಿಕೆಗಳಲ್ಲಿ, ರೈತರ ನೆನಪಿನಲ್ಲಿ ಉಳಿಯವಂತಾಗಬೇಕೆಂದು ಮುಖಂಡರು ನುಡಿ ನಮನದಲ್ಲಿ ಒತ್ತಾಯಿಸಿದರು.

ಎಪಿಎಂಸಿ ಅಧ್ಯಕ್ಷ ಮತ್ತು‌ ನಿರ್ದೇಶಕರು ಪುಟ್ಟಣಯ್ಯವರ ಒಡನಾಟ ನೆನಪಿಸಿಕೊಳ್ಳುವ ಜತೆಗೆ, ಈ ಭವನವನ್ನು ನವೀಕರಿಸಲು ₹22 ಲಕ್ಷಕ್ಕೆ ಅನುಮೋದನೆ ತೆಗೆದುಕೊಂಡಿದ್ದೇವೆ. ಈಗ ಭವನಕ್ಕೆ ಹೆಸರಿಡುವ ಕುರಿತು ಮಾತನಾಡಿದ್ದೇವೆ. ಪುಟ್ಟಣ್ಣಯ್ಯ ಅವರಂಥ ರೈತ ನಾಯಕರ ಹೆಸರನ್ನು ಇಡಲು ಯಾರು ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಭಾವಿಸಿದ್ದೇನೆ' ಎಂದು ಅಭಿಪ್ರಾಯಪಟ್ಟರು‌.

ಹಿರಿಯ ಪತ್ರಕರ್ತ ಷಣ್ಮುಖಪ್ಪ ಮಾತನಾಡಿ, 'ಪ್ರೊ. ಎಂ.ಡಿ.ನಂಜುಂಡಸ್ವಾಮಿ ನಂತರ ಅಧ್ಯನಪೂರ್ಣವಾಗಿ ವಿಚಾರಗಳನ್ನು ಮಂಡಿಸುತ್ತಿದ್ದವರು ಕೆ.ಎಸ್.ಪುಟ್ಟಣ್ಣಯ್ಯ. ಅವರು ವಿಧಾನಸೌಧದಲ್ಲಿ ಮಾತನಾಡುತ್ತಿದ್ದರೆ, ನಿಶ್ಯಬ್ಧವಾಗಿ‌ ಕುಳಿತು ಕೇಳುತ್ತಿದ್ದರು. ಇಂಥ ಅಧ್ಯಯನಶೀಲ ರೈತ ನಾಯಕನ ಹೆಸರನ್ನು ಅವರೇ ಹೆಚ್ಚಾಗಿ ಪ್ರತಿಪಾದಿಸುತ್ತಿದ್ದ ಜಲಸಂರಕ್ಷಣಾ ಯೋಜನೆಯೊಂದಕ್ಕೆ ನಾಮಕರಣ ಮಾಡಬೇಕು' ಎಂದು ಸರ್ಕಾರಕ್ಕೆ ಮನವಿ ಮಾಡಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.