ವಿಂಧ್ಯಗಿರಿ (ಶ್ರವಣಬೆಳಗೊಳ): ಕಡಿಮೆಯಾದ ಭಕ್ತರ ಸಂಖ್ಯೆ, ರಂಗು ಕಳೆದುಕೊಳ್ಳದ ಅಭಿಷೇಕ, ಜೈನ ಮುನಿಗಳ ಅಹಿಂಸಾ ತತ್ವದ ಆಚರಣೆ. ಇವಿಷ್ಟು ಬಾಹುಬಲಿಯ ಮಹಾಮಸ್ತಕಾಭಿಷೇಕದ ಮೂರನೇ ದಿನದ ಮುಖ್ಯಾಂಶಗಳು.
ಕಳೆದ ಎರಡು ದಿನಗಳಿಂದ ಬೆಟ್ಟದಲ್ಲಿ ಕೇಳಿಸುತ್ತಿದ್ದ ಬಾಹುಬಲಿಯ ಜಯಘೋಷದ ಉದ್ಗಾರಗಳ ಕಾವು ಸೋಮವಾರ ಸ್ವಲ್ಪ ಮಟ್ಟಿಗೆ ಕ್ಷೀಣಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಕಾರಣದಿಂದಾಗಿ ಏರ್ಪಾಡಾಗಿದ್ದ ಬಿಗಿಭದ್ರತೆಯಿಂದಾಗಿ ಬೆಳಗ್ಗೆಯಿಂದಲೇ ಪಟ್ಟಣದ ಮುಖ್ಯಬೀದಿಗಳಲ್ಲಿ ಜನ ಸಂಚಾರ ವಿರಳವಾಗಿತ್ತು.
ಮಸ್ತಕಾಭಿಷೇಕದ ಮೊದಲೆರಡು ದಿನಗಳಲ್ಲಿ ಗಿಜಿಗುಟ್ಟಿದ ರಸ್ತೆಗಳು ಸೋಮವಾರ ಬಿಕೋ ಎನ್ನುತ್ತಿದ್ದವು. ಪ್ರಧಾನಿ ಬೆಳಗೊಳದಿಂದ ನಿರ್ಗಮಿಸಿದ ಮೇಲಷ್ಟೇ, ಊರಿಗೆ ಜೀವಕಳೆ ಮರುಕಳಿಸಿದ್ದು.
ಭಕ್ತಜನ ಮಾತ್ರವಲ್ಲದೆ, ಅಭಿಷೇಕದ ಸಂದರ್ಭದಲ್ಲಿ ಹಾಜರಿದ್ದ ಆಚಾರ್ಯರು ಹಾಗೂ ಮಾತಾಜಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿತ್ತು.
ಭಕ್ತರ ಸಂಖ್ಯೆ ಕೊಂಚ ಇಳಿಮುಖವಾಗಿದ್ದರೂ ಅಭಿಷೇಕದ ರಂಗು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಬೆಳಗ್ಗೆ 8ರಿಂದ ಮಧ್ಯಾಹ್ನ 2.30ರವರೆಗೆ ನಡೆದ ಮಸ್ತಕಾಭಿಷೇಕದಲ್ಲಿ ಗೊಮ್ಮಟಮೂರ್ತಿ ಹಲವು ರಂಗುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನೆರೆದ ಭಕ್ತರು ಭಾವಪರವಶರಾದರು.
ಎರಡು ದಿನಗಳ ಅಭಿಷೇಕದ ದ್ರವ್ಯಗಳ ಆಕರ್ಷಣೆಯ ಕಾರಣದಿಂದ ಸಣ್ಣ ಸಣ್ಣ ಕೀಟಗಳು ಗೊಮ್ಮಟ ಮೂರ್ತಿಯ ಆಕರ್ಷಣೆಗೊಳಗಾಗಿದ್ದವು. ಅಭಿಷೇಕದ ಸಂದರ್ಭದಲ್ಲಿ ದ್ರವ್ಯಗಳೊಂದಿಗೆ ಮೂರ್ತಿಯ ಪದತಲ ಸೇರುತ್ತಿದ್ದ ಕೀಟಗಳನ್ನು ಸನ್ಯಾಸಿಯೊಬ್ಬರು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದರು. ಅಭಿಷೇಕ ಜಲದಲ್ಲಿ ದುಂಬಿಯೊಂದು ಶಕ್ತಿಗುಂದಿ ಒದ್ದಾಡುತ್ತಿದ್ದಾಗ ಮುನಿಯೊಬ್ಬರು ಅದನ್ನು ಎಚ್ಚರದಿಂದ ಎತ್ತಿ ದೂರಕ್ಕೆ ಬಿಟ್ಟ ದೃಶ್ಯ ಅಪರೂಪದ್ದಾಗಿತ್ತು.
ಅಭಿಷೇಕ ಮುಗಿದ ನಂತರ ಜನಸಾಮಾನ್ಯರಿಗೆ ಬೆಟ್ಟಕ್ಕೆ ಹೋಗಲು ಅವಕಾಶ ಕಲ್ಪಿಸಲಾಯಿತು. ಬೆಟ್ಟದ ದಾರಿಯಲ್ಲಿ ಜನರ ಸಂಖ್ಯೆ ಹೆಚ್ಚಿದಂತೆ ವಿಂಧ್ಯಗಿರಿಯಲ್ಲಿ ಮತ್ತೆ ಜೀವಸಂಚಾರ ಗರಿಗಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.