ADVERTISEMENT

ವಿಶ್ವಪ್ರೇಮದ ’ಬಾಹುಬಲಿ ಬ್ರಾಂಡ್!’

ಚ.ಹ.ರಘುನಾಥ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ವಿಶ್ವಪ್ರೇಮದ ’ಬಾಹುಬಲಿ ಬ್ರಾಂಡ್!’
ವಿಶ್ವಪ್ರೇಮದ ’ಬಾಹುಬಲಿ ಬ್ರಾಂಡ್!’   

ಶ್ರವಣಬೆಳಗೊಳ: ನನಗಿಲ್ಲಿ ’ಮಿನಿ ಭಾರತ’ ಕಾಣಿಸುತ್ತಿದೆ ಎನ್ನುವುದು ಶ್ರವಣಬೆಳಗೊಳದ ಬಗ್ಗೆ ಪ್ರಸಿದ್ಧ ಛಾಯಾಗ್ರಾಹಕ ಟಿ.ಎಸ್‌. ಸತ್ಯನ್‌ ಅವರ ಉದ್ಗಾರ. ಸತ್ಯನ್‌ರ ಕಪ್ಪು–ಬಿಳುಪು ಫೋಟೊಗಳ ಯುಗದಿಂದ ಡಿಜಿಟಲ್ ರಂಗಿನ ದಿನಗಳಿಗೆ ಗೊಮ್ಮಟನಗರಿ ಕಾಲಿಟ್ಟಿದೆ. ಹಾಗಾಗಿ ಇಲ್ಲಿ ಕಾಣಿಸುವುದು ಮಿನಿ ಭಾರತವಲ್ಲ – ವಿಶ್ವದ ಒಂದು ತುಣುಕು. ಗೊಮ್ಮಟಮೂರ್ತಿ ಈಗ ಅಂತರರಾಷ್ಟ್ರೀಯ ಬ್ರಾಂಡ್‌.

ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಿರುವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕೂಡ, ಬೆಳಗೊಳಕ್ಕೆ ಬರುವ ವಿದೇಶಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದನ್ನು ಒಪ್ಪಿಕೊಂಡರು.

’ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಹಿತ್ಯಿಕವಾಗಿ ನಾವೆಷ್ಟೇ ಪ್ರಚಾರ ಮಾಡಿದರೂ ಬಾಹುಬಲಿಯ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಕಷ್ಟ. ವೈಯಕ್ತಿಕವಾಗಿ ಇಲ್ಲಿಗೆ ಬಂದು ದರ್ಶನ ಮಾಡಿದಾಗ ಉಂಟಾಗುವ ಭಾವನೆಯೇ ಬೇರೆ. ಇಲ್ಲಿಂದ ಹೋಗುವಾಗ ವಿಶ್ವಪ್ರೇಮ ಹಾಗೂ ರಾಗದ್ವೇಷಗಳನ್ನು ಮೀರಿದ ತ್ಯಾಗದ ಸಂದೇಶವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ’ ಎಂದು ’ಪ್ರಜಾವಾಣಿ’ ಜೊತೆ ಮಾತನಾಡಿದ ಸ್ವಾಮೀಜಿ ಹೇಳಿದರು.

ADVERTISEMENT

‘ಬಾಹುಬಲಿ ಮೂರ್ತಿಯನ್ನು ನೋಡಿದರೆ ಸಾಕು – ಅಹಿಂಸೆ, ಶಾಂತಿ, ತ್ಯಾಗದ ಮೌಲ್ಯಗಳು ಕಣ್ಮುಂದೆ ಬರುತ್ತವೆ’ ಎನ್ನವುದು ಅವರ ಅಭಿಪ್ರಾಯ.

ಕಾಲಕ್ಕೆ ತಕ್ಕಂತೆ ಮಹಾಮಸ್ತಕಾಭಿಷೇಕ ಪ್ರಕ್ರಿಯೆ ಕೂಡ ಆಧುನಿಕಗೊಂಡಿದೆಯೇ ಎನ್ನುವ ಪ್ರಶ್ನೆಗೆ, ’ಅಭಿಷೇಕದ ಪರಂಪರೆಯಲ್ಲಿ ವ್ಯತ್ಯಾಸವಿಲ್ಲ. ಭಕ್ತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಾಗಿದೆ. ಭೌತಿಕ ವ್ಯವಸ್ಥೆ ಬದಲಾಗಿದೆಯಷ್ಟೇ; ಆಧ್ಯಾತ್ಮಿಕ ಪರಂಪರೆ ಹಾಗೆಯೇ ಇದೆ’ ಎಂದರು.

’ನಾವು ಈ ಉತ್ಸವದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಭಾವನೆ ಯುವ ಜನರಲ್ಲಿ ಹೆಚ್ಚಾಗಿದೆ’ ಎನ್ನುವ ಅವರ ಮಾತಿನಲ್ಲಿ, ಯುವ ತಲೆಮಾರು ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಉತ್ಸಾಹ ತಾಳುತ್ತಿರುವ ಬಗ್ಗೆ ಸಮಾಧಾನ ಇದ್ದಂತಿತ್ತು.

ಎರಡು ಮಹಾಮಸ್ತಕಾಭಿಷೇಕಗಳ ನಡುವೆ ಹನ್ನೆರಡು ವರ್ಷಗಳ ಅಂತರವಿದೆ. ಇಷ್ಟು ದೀರ್ಘ ಅವಧಿಯಲ್ಲಿ ಬಾಹುಬಲಿಯ ಆಶಯಗಳನ್ನು ಉಳಿಸಿಕೊಂಡು ಹೋಗುವ ಉದ್ದೇಶದಿಂದ, ಬಾಹುಬಲಿ ದಿವ್ಯ ಸನ್ನಿಧಿಯಲ್ಲಿ ಒಂದಲ್ಲಾ ಬಗೆಯ ಭಕ್ತಿ–ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ ಎಂದು ಸ್ವಾಮೀಜಿ ಹೇಳಿದರು.

ಕತ್ತಲಲ್ಲಿ ಗೊಮ್ಮಟನ ಬೆಳಕು:

ಹಗಲಿನಲ್ಲಿ ಮಾತ್ರವಲ್ಲದೆ ರಾತ್ರಿಯಲ್ಲೂ ಬಾಹುಬಲಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಟ್ಟಕ್ಕೆ ಎಳೆದ ಬೆಳ್ಳಿಗೆರೆಯಂತೆ ಕಾಣಿಸುವ ವಿದ್ಯುದ್ದೀಪಗಳ ಅಲಂಕಾರವನ್ನು ನೋಡುತ್ತಾ, ಕತ್ತಲ ಕ್ಯಾನ್ವಾಸ್‌ನಲ್ಲಿ ಬಾಹುಬಲಿ ಮೂರ್ತಿಯನ್ನು ನೋಡುವುದು, ಹಗಲಿಗಿಂತ ಬೇರೆಯದೇ ಅನುಭವ ನೀಡುತ್ತದೆ.

ಮಸ್ತಕಾಭಿಷೇಕದ ಮೊದಲ ದಿನ ರಾತ್ರಿ 2ರವರೆಗೆ ಬೆಟ್ಟದ ಬಾಗಿಲು ತೆಗೆಯಲಾಗಿತ್ತು, ಎರಡನೇ ದಿನ ರಾತ್ರಿ 12ರವರೆಗೆ ದರ್ಶನಕ್ಕೆ ಅವಕಾಶವಿದ್ದರೆ, ಮೂರನೇ ದಿನ ರಾತ್ರಿ ಸುಮಾರು 11ರವರೆಗೂ ವಿಂಧ್ಯಗಿರಿಯಲ್ಲಿ ಜನರ ಕಲರವವಿತ್ತು.

ನಾಲ್ಕನೇ ದಿನವೂ ಕುಗ್ಗದ ಉತ್ಸಾಹ:

ಮಸ್ತಕಾಭಿಷೇಕದ ನಾಲ್ಕನೇ ದಿನವಾದ ಮಂಗಳವಾರ ಕೂಡ ವಿಂಧ್ಯಗಿರಿಯಲ್ಲಿ ಭಕ್ತರ ಉತ್ಸಾಹ ಕೊಂಚವೂ ಕಡಿಮೆಯಾಗಿರಲಿಲ್ಲ. ಪಾಸುಳ್ಳವರು ದೊಡ್ಡ ಬೆಟ್ಟವೇರಿದರೆ, ಉಳಿದವರು ಚಂದ್ರಗಿರಿಯನ್ನು ಹತ್ತಿ ಅಲ್ಲಿಂದಲೇ ಅಭಿಷೇಕ ನೋಡಿದರು.

***

ವಿಶ್ವದ ಧಾರ್ಮಿಕ ಇತಿಹಾಸದಲ್ಲಿ ಬಾಹುಬಲಿ ಒಂದು ಅಚ್ಚಳಿಯದ ಸಂದೇಶ. ವಿಶ್ವಶಾಂತಿಯ ಸಂಕೇತ
–ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

***

ಭಾರತದ ಕಲೆ, ಸಂಸ್ಕೃತಿ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವೆ. ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಒಳ್ಳೆಯ ಅನುಭವವಾಗಿತ್ತು. ಬಾಹುಬಲಿ ಮಹಾಮಸ್ತಕಾಭಿಷೇಕ ಹೇಗಿರುತ್ತದೆ ಎಂಬ ಕುತೂಹಲ ಇತ್ತು. ಹಲವು ನಿಯತಕಾಲಿಕೆಗಳಿಗೆ ಫೋಟೊಗಳನ್ನು ನೀಡುತ್ತೇನೆ. ನಾಲ್ಕು ದಿನಗಳಿಂದ ಬಾಹುಬಲಿ ಮಜ್ಜನದ ಅದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಮುಂದಿನ ಬಾರಿ ಬರುವಾಗ ನನ್ನ ಕುಟುಂಬದ ಸದಸ್ಯರನ್ನೂ ಕರೆತರುತ್ತೇನೆ.
–ಲಿಯೊ ಫ್ಲಾಟ್‌ಕಿನ್, ಹವ್ಯಾಸಿ ಛಾಯಾಗ್ರಾಹಕ, ಅಮೆರಿಕ

***

ಬಾಹುಬಲಿ ಮಹಾಮಸ್ತಕಾಭಿಷೇಕ ನೋಡಬೇಕೆನ್ನುವುದು ನನ್ನ ಬಹುದಿನಗಳ ಕನಸಾಗಿತ್ತು. ಅದಕ್ಕಾಗಿ, 20 ದಿನಗಳ ಭಾರತ ಪ್ರವಾಸದ ಯೋಜನೆ ರೂಪಿಸಿಕೊಂಡು ಬಂದಿದ್ದೇನೆ. ಇಂದೊಂದು ವಿಶೇಷ ಆಚರಣೆಯಾಗಿದ್ದು, ಅಭಿಷೇಕವನ್ನು ಕಣ್ತುಂಬಿಕೊಳ್ಳಲು ಬಂದಿರುವ ಜನರನ್ನು ನೋಡಿ ಸಾಕಷ್ಟು ಖುಷಿಯಾಗಿದೆ. ಇಂತಹ ಅದ್ಭುತ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ನನ್ನ ಸಂತೋಷಕ್ಕೆ ಪಾರವೇ ಇಲ್ಲ. 
–ಮೊಗಾಸೆ, ಪ್ರವಾಸಿಗ, ಫ್ರಾನ್ಸ್‌

***

ಚಿಕ್ಕವಳಿದ್ದಾಗ ಅಪ್ಪನ ಜತೆ ಬಾಹುಬಲಿ ಮಹಾಮಜ್ಜನ ನೋಡಲು ಬರುತ್ತಿದ್ದೆ. ಆಗ ಬಿದಿರು, ಸುರುಗಿ ಕಂಬಗಳಿಂದ ಅಟ್ಟಣಿಗೆ ಕಟ್ಟುತ್ತಿದ್ದರು. ಅದಕ್ಕೆ ಎರಡು ವರ್ಷ ಹಿಡಿಯುತ್ತಿತ್ತು. 500ರಿಂದ ಸಾವಿರ ಜನರು ಮಸ್ತಕಾಭಿಷೇಕದಲ್ಲಿ ಭಾಗವಹಿಸುತ್ತಿದ್ದರು. ಈಗ ಅಟ್ಟಣಿಗೆ ದೊಡ್ಡದಾಗಿದೆ, ಎಲ್ಲಿ ನೋಡಿದರೂ ಜನ. ಇದು ನಾನು ನೋಡುತ್ತಿರುವ 6ನೇ ಮಸ್ತಕಾಭಿಷೇಕ.  ಈಗ ವಯಸ್ಸು 90. ಮುಂದೆ ಇರುತ್ತೇನೋ ಇಲ್ಲವೋ ಎಂದು ಯಾರೋ ಪುಣ್ಯಾತ್ಮರು ಪಾಸ್‌ ಕೊಟ್ಟರು. ಮೊಮ್ಮಗನ ಜತೆ ಬೆಟ್ಟಕ್ಕೆ ಬಂದಿದ್ದೇನೆ. 15 ರಿಂದ 20 ಮೆಟ್ಟಿಲು ಹತ್ತಿದ ನಂತರ ಕುಳಿತು, ಸ್ವಲ್ಪ ನೀರು ಕುಡಿದು, ಸುಧಾರಿಸಿಕೊಂಡು ಬೆಟ್ಟವನ್ನು ಏರಿದೆ. 
–ಎಚ್‌.ಎನ್‌. ಸುಂದರಮ್ಮ, ಸಾಲಿಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.