ADVERTISEMENT

ಬೆಂಗ್ರೆ ಪ್ರದೇಶದಲ್ಲಿ‌ ನಡೆದ ಘಟನೆ ಖಂಡನೀಯ: ಶಾಸಕ ಲೋಬೊ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 7:37 IST
Last Updated 21 ಫೆಬ್ರುವರಿ 2018, 7:37 IST
ಶಾಸಕ ಜೆ.ಆರ್. ಲೋಬೊ‌ (ಸಂಗ್ರಹ ಚಿತ್ರ)
ಶಾಸಕ ಜೆ.ಆರ್. ಲೋಬೊ‌ (ಸಂಗ್ರಹ ಚಿತ್ರ)   

ಮಂಗಳೂರು: ನಗರದ ಬೆಂಗ್ರೆ ಪ್ರದೇಶದಲ್ಲಿ ಘರ್ಷಣೆ ನಡೆದಿರುವುದು ಖಂಡನೀಯ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಜೆ.ಆರ್. ಲೋಬೊ‌ ಹೇಳಿದರು.

ಸುಮಾರು 5 ಬಸ್‌ಗಳಲ್ಲಿ ಜನರು ಉಡುಪಿಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಒಂದು ಬಸ್‌ನಲ್ಲಿದ್ದ ಕೆಲವರು ಘೋಷಣೆಗಳನ್ನು ಕೂಗಿದ್ದು, ಇದರಿಂದ ಘರ್ಷಣೆ ನಡೆದಿತ್ತು. ತೋಟ ಬೆಂಗ್ರೆ, ಕಸಬಾ ಬೆಂಗ್ರೆ ಜನರು‌ ಸೇರಿ ಸೌಹಾರ್ದದಿಂದ ಅದನ್ನು ಪರಿಹರಿಸಿದ್ದರು ಎಂದು‌‌ ಲೋಬೊ‌ ತಿಳಿಸಿದರು.

‘ರಾತ್ರಿ ತೋಟ ಬೆಂಗ್ರೆಯ ಮಸೀದಿಯೊಂದಕ್ಕೆ ಸೋಡಾ ಬಾಟಲಿ ಬಿಸಾಡಲಾಗಿದ್ದು, ಕಿಟಕಿಗೆ ಸ್ವಲ್ಪ ಹಾನಿಯಾಗಿದೆ. ಮತ್ತೊಂದು ಮನೆಗೆ ಕಲ್ಲು ತೂರಲಾಗಿದ್ದು, ವಾಹನ‌ ಜಖಂಗೊಂಡಿದೆ. ಘಟನೆಯಲ್ಲಿ ನಾಲ್ಕೈದು ಮಂದಿಗೆ ಗಾಯವಾಗಿದ್ದು, ಪೊಲೀಸ್ ವಾಹನಕ್ಕೂ ಹಾನಿಯಾಗಿದೆ. ಘಟನೆ ನನಗೆ ನೋವು ತಂದಿದೆ’ ಎಂದು ಲೋಬೊ ತಿಳಿಸಿದರು.

ADVERTISEMENT

ಎರಡೂ ಪ್ರದೇಶದ ಜನರು‌‌ ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಸೌಹಾರ್ದ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಘರ್ಷಣೆಗೆ ಕಾರಣವಾದವರು ಯಾರೇ ಆಗಲಿ‌ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಇದರಲ್ಲಿ‌ ಯಾವುದೇ ರಾಜಿ‌ ಮಾಡುವುದಿಲ್ಲ‌‌ ಎಂದು ಅವರು ಹೇಳಿದರು.

ರಾಜಕೀಯ ಮಾಡುವುದಿಲ್ಲ.‌ ರಕ್ತ ಸುರಿಸಿ‌ ಚುನಾವಣೆ ಮಾಡುವುದು ಬೇಕಿಲ್ಲ. ಶಾಂತಿ, ಸೌಹಾರ್ದ ನೆಲೆಸಬೇಕು. ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು. ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ‌ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.