ADVERTISEMENT

ಅಂಗನವಾಡಿ ಪಠ್ಯಕ್ರಮಕ್ಕೆ 6 ಉಪ ಸಮಿತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:00 IST
Last Updated 1 ಆಗಸ್ಟ್ 2022, 21:00 IST
ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್    

ಬೆಂಗಳೂರು: ರಾಜ್ಯದ ಅಂಗನವಾಡಿಗಳಿಗೆ ಶಾಲಾ ಸಾಂಸ್ಥಿಕ ಸ್ವರೂಪ ನೀಡಲು ಸಮ್ಮತಿ ಸೂಚಿಸಿರುವ ರಾಜ್ಯ ಸರ್ಕಾರ 8 ವರ್ಷದ ಒಳಗಿನ ಮಕ್ಕಳ ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣ ಕಲಿಕೆಗೆ ಅಗತ್ಯ ಪಠ್ಯಕ್ರಮ ಸಿದ್ಧಪಡಿಸಲು 6 ಉಪ ಸಮಿತಿಗಳನ್ನು ರಚಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯದಲ್ಲಿ ಶಿಕ್ಷಣ ಕ್ಷೇತ್ರದ ತಜ್ಞರು, ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿಗಳು ಈಗಾಗಲೇ ಕಾರ್ಯ ಆರಂಭಿಸಿದ್ದು, ಅಕ್ಟೋಬರ್‌ ಒಳಗೆ ಸಮಗ್ರ ಯೋಜನೆ ರೂಪಿಸಲಿವೆ.

ರಾಜ್ಯದ65,911 ಅಂಗನವಾಡಿ ಕೇಂದ್ರಗಳಲ್ಲಿ ಪ್ರಸ್ತುತ 41 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ಒದಗಿಸಲಾಗುತ್ತಿದೆ. ಅವುಗಳಿಗೆ ಶಾಲಾ ಸಾಂಸ್ಥಿಕ ರೂಪ ನೀಡುತ್ತಿರುವ ಕಾರಣ ಮಕ್ಕಳ ಕಲಿಕೆಗೆ ಭದ್ರ ಬುನಾದಿ ಕಲ್ಪಿಸಲು ಹೊಸ ಪಠ್ಯಕ್ರಮ ಅಳವಡಿಸಲಾಗುತ್ತಿದೆ.

ADVERTISEMENT

ಪಠ್ಯಕ್ರಮ ವಿನ್ಯಾಸ, ಬೋಧನೆ, ಕಲಿಕಾ ಸಾಮಗ್ರಿಗಳು, ಮೌಲ್ಯಮಾಪನ, ಸಾಮರ್ಥ್ಯ ಅಭಿವೃದ್ಧಿ, ಮಗುವಿನ ಆರಂಭಿಕ ಉತ್ತೇಜನಗಳಿಗೆ ಒತ್ತು ನೀಡಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.

ಈ ಎಲ್ಲ ಸಮಿತಿಗಳ ಮೇಲುಸ್ತುವಾರಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅಧ್ಯಕ್ಷತೆಯಲ್ಲಿ 9 ಸದಸ್ಯರನ್ನು ಒಳಗೊಂಡ ‘ಮೇಲ್ವಿಚಾರಣೆ ಮತ್ತು ಉಸ್ತುವಾರಿ’ ಸಮಿತಿ ರಚಿಸಲಾಗಿದೆ.

ಬಾಲ್ಯಪೂರ್ವ ಕಲಿಕೆಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಸರ್ಕಾರ ಅದಕ್ಕಾಗಿಯೇ ಮತ್ತೊಂದು ಉಪ ಸಮಿತಿ ರಚಿಸಿದೆ. ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಬಾಲವಿಕಾಸ ಸಮಿತಿಗಳು, ಪೋಷಕರ ಪಾತ್ರ, ಕರ್ತವ್ಯ ನಿಗದಿಯ ಸಾಧ್ಯತೆಗಳ ವರದಿಯನ್ನು ಈ ಸಮಿತಿ ನೀಡಲಿದೆ.

ಶಿಕ್ಷಕಿಯರ ಗೌರವ ಪಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಲು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ.

ದಕ್ಷಿಣ ಭಾರತ ಪ್ರಾದೇಶಿಕ ಇಂಗ್ಲಿಷ್‌ ಭಾಷಾ ಸಂಸ್ಥೆ,ಟಾಟಾ ಟ್ರಸ್ಟ್‌ನ ಕಲಿಕಾ ವಿಭಾಗದ ಸಹಯೋಗದಲ್ಲಿ 12 ಸಾವಿರ ಕಾರ್ಯಕರ್ತೆಯರಿಗೆ ಶಿಕ್ಷಣಚಟುವಟಿಕೆ, ಮಕ್ಕಳ ಜತೆ ತೊಡಗಿಸಿಕೊಳ್ಳುವ ಕುರಿತು ಮೊದಲ ಹಂತದ ತರಬೇತಿ ನೀಡಲಾಗಿದೆ.

ಎರಡನೇ ಹಂತದಲ್ಲಿ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (ಡಯಟ್‌) 64 ಸಾವಿರ ಕಾರ್ಯಕರ್ತೆಯರಿಗೆ ಅವರ ವಿದ್ಯಾರ್ಹತೆಯ ಆಧಾರದಲ್ಲಿ ಹಲವು ಹಂತಗಳಲ್ಲಿ ಸಾಮರ್ಥ್ಯ ವೃದ್ಧಿ ತರಬೇತಿ ನೀಡಲಿವೆ.

ಸಮಿತಿ;ಅಧ್ಯಕ್ಷರು

1. ಪಠ್ಯಕ್ರಮ ವಿನ್ಯಾಸ ಸಮಿತಿ;ವಿನಿತ್‌ ಕೌಲ್‌, ಪ್ರಾಧ್ಯಾಪಕರು, ದೆಹಲಿ ಅಂಬೇಡ್ಕರ್ ವಿವಿ

2. ಬೋಧನೆ, ಕಲಿಕೆ, ಮೌಲ್ಯಮಾಪನ;ನಳಿನ್‌ ಅತುಲ್‌, ಐಎಎಸ್‌ ಅಧಿಕಾರಿ

3. ಸಾಮರ್ಥ್ಯ ಅಭಿವೃದ್ಧಿ;ಚಿತ್ತರಂಜನ್‌ ಕೌಲ್‌, ಸೆಂಟರ್‌ ಫಾರ್ ಲರ್ನಿಂಗ್ ರೀಸೋರ್ಸ್, ಪುಣೆ

4. ಸಮುದಾಯ ತಲುಪುವಿಕೆ;ಸಂಜಯ್‌ ಕೌಲ್‌, ನಿವೃತ್ತ ಐಎಎಸ್‌ ಅಧಿಕಾರಿ

5. ಮಗುವಿನ ಆರಂಭಿಕ ಉತ್ತೇಜನ;ಡಾ.ಶೇಖರ್ ಶೇಷಾದ್ರಿ, ಮನೋವೈದ್ಯ, ನಿಮ್ಹಾನ್ಸ್.

6. ಮೇಲ್ವಿಚಾರಣೆ ಮತ್ತು ಉಸ್ತುವಾರಿ; ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.