ADVERTISEMENT

ರಾಜ್ಯದಲ್ಲಿ ಒಂದೇ ದಿನ 69 ಪ್ರಕರಣ: ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್‌–19: ರಾಜ್ಯದಲ್ಲಿ ಮೃತರ ಸಂಖ್ಯೆ 36ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:43 IST
Last Updated 15 ಮೇ 2020, 19:43 IST
ಕೋವಿಡ್‌ ಸೋಂಕು ಪತ್ತೆ ಕಾರ್ಯದಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿ
ಕೋವಿಡ್‌ ಸೋಂಕು ಪತ್ತೆ ಕಾರ್ಯದಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿ    
""

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 69 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈವರೆಗೆ ಒಂದೇ ದಿನ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಸೋಂಕಿತರ ಸಂಖ್ಯೆ ಸಾವಿರದ ಗಡಿ (1,056 ) ದಾಟಿದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಂಕಿ ಅಂಶಗಳು

ರಾಜ್ಯದಲ್ಲಿ ಮಾರ್ಚ್‌ 8ರಂದು ಬೆಂಗಳೂರಿನಲ್ಲಿ ಪ್ರಥಮ ಕೋವಿಡ್ ಪ್ರಕರಣ ವರದಿಯಾಗಿತ್ತು. ಹಂತ ಹಂತವಾಗಿ ವಿಸ್ತರಿಸಿದ ಸೋಂಕು, ಈಗ ರಾಜ್ಯದ 25 ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ನಿತ್ಯ ಸರಾಸರಿ 4,500 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಲಾಕ್‌ ಡೌನ್‌ ಸಡಿಲಿಕೆಯ ಜತೆಗೆ ಅನ್ಯ ರಾಜ್ಯ ಹಾಗೂ ವಿದೇಶಿಗರನ್ನು ಕರೆತಂದಿರುವುದು ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲು ಪ್ರಮುಖ ಕಾರಣ. ಕೆಂಪು ವಲಯವಾಗಿದ್ದ ಮೈಸೂರಿನಲ್ಲಿ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ.

ಮೃತರ ಸಂಖ್ಯೆ ಏರಿಕೆ: ಬೀದರ್‌ನ ಚಿಟಗುಪ್ಪದ 52 ವರ್ಷದ ಪುರುಷ ಕೊರೊನಾದಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ದೃಢಪಟ್ಟಿದೆ. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಅವರು, ಮೇ 12ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದರಿಂದಾಗಿ ಸತ್ತವರ ಸಂಖ್ಯೆ 36ಕ್ಕೆ ತಲುಪಿದೆ.

ADVERTISEMENT

ಶಿವಾಜಿನಗರದಲ್ಲಿ 11 ಮಂದಿಗೆ ಸೋಂಕು: ಬೆಂಗಳೂರಿನ ಶಿವಾಜಿನಗರದಲ್ಲಿ 653ನೇ ರೋಗಿಯ ದ್ವಿತೀಯ ಸಂಪರ್ಕದಿಂದ 11 ಜನರಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡದಲ್ಲಿ ವರದಿಯಾದ ಪ್ರಕರಣಗಳಲ್ಲಿ ಎಲ್ಲರೂ ದುಬೈನಿಂದ ಬಂದವ ರಾಗಿದ್ದಾರೆ. ಉಡುಪಿಯಲ್ಲಿ ವರದಿಯಾದ ಪ್ರಕರಣಗಳಿಗೂ ದುಬೈ ನಂಟಿದೆ. ಮಂಡ್ಯದಲ್ಲಿ ಮುಂಬೈ ಪ್ರವಾಸ ಮಾಡಿದವರಿಗೆ ಸೋಂಕು ಕಾಣಿಸಿಕೊಂಡಿದೆ.

ಹಾಸನದಲ್ಲಿ ಮುಂಬೈ ಪ್ರಯಾಣದ ಇತಿಹಾಸ ಹೊಂದಿರುವ 7 ವರ್ಷದ ಬಾಲಕ ಸೇರಿದಂತೆ 7 ಮಂದಿ ಸೋಂಕಿತ ರಾಗಿದ್ದಾರೆ. ಶಿವಮೊಗ್ಗದಲ್ಲಿ ಮುಂಬೈಗೆ ಪ್ರಯಾಣ ಮಾಡಿದ್ದ 42 ವರ್ಷದ ಪುರುಷರೊಬ್ಬರಲ್ಲಿ ಕಾಯಿಲೆ ಕಾಣಿಸಿಕೊಂಡಿದೆ.

30 ಸ್ಥಳಗಳಲ್ಲಿ ಶೇ 79ರಷ್ಟು ಸೋಂಕು

ನವದೆಹಲಿ: ದೇಶದಲ್ಲಿ ವರದಿಯಾಗಿರುವ ಕೋವಿಡ್‌ 19 ಪ್ರಕರಣಗಳಲ್ಲಿ ಶೇ 79ರಷ್ಟು 30 ನಗರ ಪ್ರದೇಶಗಳಲ್ಲಿಯೇ ಕೇಂದ್ರೀಕೃತವಾಗಿವೆ. ಹಾಗಾಗಿ, ಸೋಂಕಿನ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿಯೇ ತಡೆ ಪ್ರಯತ್ನಗಳನ್ನು ಬಲಪಡಿಸುವ ಬಗ್ಗೆ ಸರ್ಕಾರ ಗಮನ ಹರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.