ADVERTISEMENT

7ರಿಂದ ಕೊಡಚಾದ್ರಿ ವೈಭವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಶಿವಮೊಗ್ಗ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಜನವರಿ 7ರಿಂದ 13ರವರೆಗೆ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತುಪ್ರದರ್ಶನ, ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ~ಕೊಡಚಾದ್ರಿ ವೈಭವ-4~ ಹಮ್ಮಿಕೊಂಡಿದೆ.

ಒಟ್ಟು ಏಳು ದಿವಸ ನಡೆಯುವ ~ಕೊಡಚಾದ್ರಿ ವೈಭವ-4~ದಲ್ಲಿ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ಹಾಗೂ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಸದಸ್ಯರು ಆರ್ಥಿಕವಾಗಿ ಸ್ವಾವಲಂಬನೆ ಪಡೆಯಲು ನೆರವು ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆದ ಆರ್.ಎಂ. ಮಂಜುನಾಥಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 7ರಂದು ಸಂಜೆ 6ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಜ.13ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭಾಗವಹಿಸುವರು.

ಈ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ 300ಕ್ಕೂ ಹೆಚ್ಚಿನ ಮಳಿಗೆಗಳನ್ನು ಹಾಕಲಾಗುತ್ತದೆ. ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟದ ಜತೆಗೆ, ಪ್ರತಿ ದಿನವೂ ಮಲೆನಾಡಿನ ಹಾಗೂ ಉತ್ತರ ಕರ್ನಾಟಕದ ವಿಶೇಷ ಖಾದ್ಯ ಹಾಗೂ ವಿವಿಧ ಬಗೆಯ ತಿಂಡಿ-ತಿನಿಸುಗಳ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
 
ಅಲ್ಲದೇ, ಪ್ರತಿ ದಿನ ಸಂಜೆ ರಾಜ್ಯದ ಪ್ರಸಿದ್ಧ ಕಲಾವಿದರು, ಸ್ಥಳೀಯ ಕಲಾವಿದರು ಹಾಗೂ ಸ್ವ-ಸಹಾಯ ಗುಂಪುಗಳ ಕಲಾವಿದರನ್ನು ಒಳಗೊಂಡಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.