ADVERTISEMENT

ರಾಜ್ಯದಲ್ಲಿ ಈವರೆಗೆ ಒಟ್ಟು 7 ಮಂದಿಯಲ್ಲಿ ‘ಬ್ರಿಟನ್‌ ವೈರಸ್’ ಪತ್ತೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 3; ಶಿವಮೊಗ್ಗದಲ್ಲಿ 4

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 6:12 IST
Last Updated 30 ಡಿಸೆಂಬರ್ 2020, 6:12 IST
ಸಚಿವ ಸುಧಾಕರ್‌
ಸಚಿವ ಸುಧಾಕರ್‌   

ಬೆಂಗಳೂರು: ‘ರಾಜ್ಯದಲ್ಲಿ ಒಟ್ಟು ಏಳು ಜನರಲ್ಲಿ ರೂಪಾಂತರಿ ವೈರಾಣು (ಬ್ರಿಟನ್‌ ವೈರಸ್‌) ಸೋಂಕು ಪತ್ತೆಯಾಗಿದ್ದು, ಈ ಪೈಕಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೂರು, ಶಿವಮೊಗ್ಗದಲ್ಲಿ ನಾಲ್ವರಲ್ಲಿ ಪತ್ತೆಯಾಗಿದೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ಇಡೀ ದೇಶದಲ್ಲಿ ಬ್ರಿಟನ್‌ನಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿದಾಗ, 107 ಜನರ ಆರ್‌ಟಿಪಿಸಿಆರ್‌ ಟೆಸ್ಟ್ ಪಾಸಿಟಿವ್‌ ಬಂದಿದೆ. ನಂತರ 10 ಪ್ರಯೋಗಾಲಯಗಳಲ್ಲಿ ಈ ಎಲ್ಲರನ್ನೂ ಮತ್ತೆ ಪರೀಕ್ಷೆಗೆ ಒಳಪಡಿಸಿದಾಗ, 20 ಸೋಂಕಿತರಿಗೆ ರೂಪಾಂತರ ವೈರಾಣು ತಗಲಿರುವುದು ಪತ್ತೆಯಾಗಿದೆ. ಈ ಪೈಕಿ ಎಂಟು ಮಂದಿ ದೆಹಲಿಯವರು’ ಎಂದು ಅವರು ತಿಳಿಸಿದರು.

‘ಬ್ರಿಟನ್‌ನಿಂದ ರಾಜ್ಯಕ್ಕೆ ಬಂದ 1,614 ಜನರನ್ನು ತಪಾಸಣೆ ನಡೆಸಲಾಗಿದೆ. ಈ ಪೈಕಿ, 26 ಜನರಿಗೆ ಪಾಸಿಟಿವ್‌ ಬಂದಿತ್ತು. ಏಳು ಮಂದಿಯಲ್ಲಿ ರೂಪಾಂತರಿ ವೈರಸ್‌ ದೃಢಪಟ್ಟಿದೆ. ಆ ಪೈಕಿ, ಬೆಂಗಳೂರಿನ ಮೂರು ಮಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 39 ಮಂದಿಯನ್ನು ಮತ್ತೆ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ, ಅವರಲ್ಲಿ ಯಾರಿಗೂ ಪಾಸಿಟಿವ್ ಇಲ್ಲ. ಶಿವಮೊಗ್ಗದ ರೂಪಾಂತರಿ ವೈರಸ್‌ ದೃಢಪಟ್ಟ ನಾಲ್ವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಏಳು ಮಂದಿಯನ್ನು ಮತ್ತೆ ತಪಾಸಣೆಗೆ ಒಳಪಡಿಸಲಾಗಿದ್ದು. ಅವರಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಈ ಮೂರು ಮಂದಿಯನ್ನು ಕೇಂದ್ರ ಪ್ರಯೋಗಾಲಯದಲ್ಲಿ ಮತ್ತೆ ತಪಾಸಣೆಗೆ ಒಳಪಡಿಸಲಾಗುತ್ತದೆ. ಆದರೆ, ಯಾರಲ್ಲೂ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ. ಎಲ್ಲರಿಗೂ ಸರ್ಕಾರದ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದೂ ಅವರು ಹೇಳಿದರು.

ADVERTISEMENT

‘ಸೋಂಕು ತಗಲಿದವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ರೂಪಾಂತರಗೊಂಡ ವೈರಸ್‌ಗೆ ಹರಡುವ ವೇಗ ಶೇ 70ರಷ್ಟು ಹೆಚ್ಚು ಇದೆ. ಆದರೆ ತೀವ್ರತೆ ಕಡಿಮೆ. ರೂಪಾಂತರಿ ವೈರಸ್‌ ಹರಡದಂತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಯಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ರಾಜ್ಯ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಿದೆ’ ಎಂದು ಅವರು ವಿವರಿಸಿದರು.

‘ನೈಟ್‌ ಕರ್ಫ್ಯೂ ಈಗ ಮುಗಿದ ಅಧ್ಯಾಯ. ಈ ಬಗ್ಗೆ ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಹೊಸ ವರ್ಷಾಚರಣೆಯನ್ನು ಅತ್ಯಂತವಾಗಿ ಸರಳವಾಗಿ ಆಚರಿಸಬೇಕು ಎಂದು ಗೃಹ ಇಲಾಖೆಗೆ ಮಾಹಿತಿ ನೀಡಲಾಗಿದೆ’ ಎಂದೂ ಅವರು ಹೇಳಿದರು.

ಉಳಿದಂತೆ ದೇಶದಾದ್ಯಂತ ರೂಪಾಂತರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಅತಿ ಹೆಚ್ಚು 8 ಪ್ರಕರಣ ಪತ್ತೆಯಾಗಿದೆೆ. ದೆಹಲಿಯ ಎನ್‌ಸಿಡಿಸಿ 8, ಹೈದರಾಬಾದ್‌ನ ಸಿಸಿಎಂಬಿಯಿಂದ 2, ಕೋಲ್ಕತಾದ ಎನ್‌ಐಬಿಜಿಯಿಂದ 1, ಪುಣೆಯ ಎನ್‌ಐವಿಯಿಂದ 1 ಮತ್ತು ದೆಹಲಿಯ ಐಜಿಐಬಿಯಿಂದ 1 ಪ್ರಕರಣ ಪತ್ತೆಯಾಗಿವೆಎಂಬ ಮಾಹಿತಿ ಕೇಂದ್ರ ಆರೋಗ್ಯ ಇಲಾಖೆಯಿಂದ ಲಭ್ಯವಾಗಿದೆ.

ನಿನ್ನೆ ಬೆಂಗಳೂರಿನಲ್ಲಿ 3 ಕೇಸ್ ಸೇರಿ ದೇಶಾದ್ಯಂತ 6 ಜನರಿಗೆ ಹೊಸ ಮಾದರಿಯ ಕೊರೋನಾ ಸೋಂಕು ಧೃಡಪಟ್ಟಿತ್ತು. ತಾಯಿ–ಮಗು ಬೆಂಗಳೂರಿನಲ್ಲಿ ಹೊಸ ಮಾದರಿ ಸೋಂಕು ಧೃಡಪಟ್ಟಿದ್ದ 3 ಮಂದಿ ವಾಸವಿದ್ದ ಮನೆ, ಅಪಾರ್ಟ್‌ಮೆಂಟ್ ಸೀಲ್ ಡೌನ್ ಮಾಡಲಾಗಿತ್ತು.

ಬ್ರಿಟನ್ನಿನಿಂದ ಆಗಮಿಸಿದವರ ಹೊಸ ರೂಪಾಂತರಿ ಕೋವಿಡ್ ಟೆಸ್ಟ್ ಮತ್ತು ಇತರೆ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಗೆ ಬೆಂಗಳೂರಿನ ನಿಮ್ಹಾನ್ಸ್ ಸೇರಿ ದೇಶದಲ್ಲಿ 10 ಪ್ರಯೋಗಾಲಯಗಳನ್ನು ನಿಗದಿಪಡಿಸಲಾಗಿದೆ. ಹೊಸ ಮಾದರಿಯ ಕೋವಿಡ್ ಪತ್ತೆಯಾದವರು ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಇದಕ್ಕಾಗಿ ಕಠಿಣ ನಿಯಮಾವಳಿ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.