ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಬುಧವಾರ 4ನೇ ತರಗತಿ ವಿದ್ಯಾರ್ಥಿ ಸೇರಿ ಏಳು ಮಂದಿ ಹಠಾತ್ಸಾವಿಗೀಡಾಗಿದ್ದಾರೆ. ಹೃದಯಾಘಾತ ಕಾರಣ ಎನ್ನಲಾಗಿದೆ.
ರಾಮನಗರ ವರದಿ: ಹೃದಯಾಘಾತದಿಂದ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕನಕಪುರ ತಾಲ್ಲೂಕಿನ ಸಂಗಮ ವನ್ಯಜೀವಿ ವಲಯದ ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿ ನೌಕರ ಮಾದೇಶ ನಾಯಕ (38) ಮತ್ತು ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಗೊಲ್ಲರದೊಡ್ಡಿಯ ಕೂಲಿ ಕಾರ್ಮಿಕ ಗಿರೀಶ್ (25) ಮೃತರು.
ಮೂವರ ಸಾವು (ದಾವಣಗೆರೆ ವರದಿ): ಜಿಲ್ಲೆಯಲ್ಲಿ ಎರಡು ದಿನಗಳ ಅವಧಿಯಲ್ಲಿ ಹೃದಯಸಂಬಂಧಿ ಕಾಯಿಲೆಗಳಿಂದ ಮೂವರುಮೃತಪಟ್ಟಿದ್ದಾರೆ. ದಾವಣಗೆರೆಯ ಜಯನಗರದ ಅಕ್ಷಯ್ (22), ಚಿಕ್ಕನಹಳ್ಳಿಯ ಹರೀಶ್ (54) ಹಾಗೂ ತಾಲ್ಲೂಕಿನ ನಾಗರಕಟ್ಟೆ ಗ್ರಾಮದ ಮಂಜ್ಯಾ ನಾಯ್ಕ (38) ಮೃತರು.
ಬುಧವಾರ ಬೆಳಿಗ್ಗೆ ಮನೆಯಲ್ಲಿ ಅಕ್ಷಯ್ ಏಕಾಏಕಿ ಕುಸಿದು ಬಿದ್ದಿದ್ದರೆ. ಹರೀಶ್ ಅವರಿಗೆ ನಸುಕಿನಲ್ಲಿ ಎದೆನೋವು ಕಾಣಿಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ನಾಗರಕಟ್ಟೆಯ ಮಂಜ್ಯಾ ನಾಯ್ಕ ಅವರು ಮಂಗಳವಾರ ಗ್ರಾಮದ ಬಳಿ ಆಟೊ ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಮಾಧ್ಯಮಗಳಿಗೆ
ಮಾಹಿತಿ ನೀಡಿದ್ದಾರೆ.
ಧಾರವಾಡ: ಮನೆಯಲ್ಲಿ ಕುಸಿದುಬಿದ್ದಿದ್ದ ಸ್ಥಳೀಯ ನಿವಾಸಿ ಜೀವಿತಾ ಕುಸುಗೂರ (26) ಎಂಬವರು ಆಸ್ಪತ್ರೆಗೆ ಒಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
‘ಜ್ವರ, ನೆಗಡಿಯಿಂದ ಬಳಲುತ್ತಿದ್ದ ಜೀವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಕುಸಿದುಬಿದ್ದರು. ಮರಣೋತ್ತರ ಪರೀಕ್ಷೆ ವರದಿ ಬಳಿಕಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ’ ಎಂದು ಡಿಎಚ್ಒ ಡಾ.ಎಸ್.ಎಂ.ಹೊನಕೇರಿ ತಿಳಿಸಿದರು.
ಕೃಷಿವಿಜ್ಞಾನ ಸ್ನಾತಕೋತ್ತರ ಪದವೀಧರೆಯಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.
ಗುಂಡ್ಲುಪೇಟೆ (ಚಾಮರಾಜನಗರ): ಪಟ್ಟಣದ ಕುರಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಮನೋಜ್ ಕುಮಾರ್ (10) ಮೃತಪಟ್ಟಿದ್ದಾನೆ.
ಈತ ದೊಡ್ಡಹುಂಡಿ ಗ್ರಾಮದ ದಿ.ನಾಗರಾಜು– ನಾಗರತ್ನಾ ದಂಪತಿ ಪುತ್ರ.
ತರಗತಿಯಲ್ಲಿ ಬುಧವಾರ ಶಾಲೆಯಲ್ಲಿ ಪಾಠ ಕೇಳುವಾಗ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಒಯ್ಯುವ ಮಾರ್ಗದಲ್ಲಿ ಮೃತಪಟ್ಟನು. ಹೃದಯ ಸಂಬಂಧಿ ಕಾಯಿಲೆ ಇತ್ತು. ಮೈಸೂರಿನ ಜಯದೇವ, ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.