ADVERTISEMENT

70 ತಾಲ್ಲೂಕುಗಳಲ್ಲಿ ಬರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ರಾಜ್ಯದಲ್ಲಿನ 21 ಜಿಲ್ಲೆಗಳ 70 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ `ಕೃಷ್ಣಾ~ದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ.

2004ರ ಮಾರ್ಗಸೂಚಿ ಅನ್ವಯ ಸತತ ನಾಲ್ಕು ವಾರಗಳ ಕಾಲ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಾಗೂ ಒಣಹವೆ ಮುಂದುವರಿದಿರುವ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಅಗತ್ಯವಿರುವ ಕಡೆ ಕುಡಿಯುವ ನೀರು, ದನಕರುಗಳ ಮೇವಿಗಾಗಿ ಗೋಶಾಲೆಯ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.


ಕಳೆದ ಏಪ್ರಿಲ್‌ನಿಂದ ಇದುವರೆಗೆ ಬರಪರಿಹಾರ ಕಾಮಗಾರಿಗಳಿಗೆ ಒಟ್ಟು 40 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆಯಾದ 11 ಕೋಟಿ ರೂಪಾಯಿ ಮತ್ತು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ 29 ಕೋಟಿ ರೂಪಾಯಿ ಸೇರಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 126 ಕೋಟಿ ರೂಪಾಯಿ ಇದ್ದು ಬರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

ಮೇವಿನ ಕೊರತೆ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಹತ್ತು ಕಡೆ ಗೋಶಾಲೆಗಳನ್ನು ತೆರೆಯಲಾಗಿದ್ದು, 2,500 ದನಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ. ಗೋಶಾಲೆಗೆ ಅಗತ್ಯವಿರುವ ಮೇವು ಖರೀದಿಸಿ ದಾಸ್ತಾನು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. 

ಕನಿಷ್ಠ ಮಳೆ

ಬೆಂಗಳೂರು: ಕಳೆದ 40 ವರ್ಷಗಳ ಸರಾಸರಿ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯ ಎರಡನೆಯ ಅತಿ ಕನಿಷ್ಠ ಮಳೆಯನ್ನು ಕಂಡಿದೆ ಎಂದು ಬರಗಾಲ ಉಸ್ತುವಾರಿ ಘಟಕದ ಡಾ.ವಿ.ಎಸ್. ಪ್ರಕಾಶ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT