ADVERTISEMENT

ನಾಮನಿರ್ದೇಶನ: ಸೂಕ್ತ ಪ್ರಾತಿನಿಧ್ಯಕ್ಕೆ ಮುಸ್ಲಿಮರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:49 IST
Last Updated 28 ಜೂನ್ 2025, 16:49 IST
ಜಮೀರ್‌ ಅಹಮದ್‌ ಖಾನ್‌
ಜಮೀರ್‌ ಅಹಮದ್‌ ಖಾನ್‌   

ಬೆಂಗಳೂರು: ನಿಗಮ, ಮಂಡಳಿ, ವಿಧಾನಪರಿಷತ್‌ ಸೇರಿದಂತೆ ಸರ್ಕಾರದ ನಾಮನಿರ್ದೇಶನಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್. ಜಮೀರ್‌ ಅಹಮದ್‌ ಖಾನ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ನೇತೃತ್ವದಲ್ಲಿ ಮುಸ್ಲಿಂ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿ, ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲು ಕೋರಿತು.

‘ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ಕಲ್ಪಿಸಲು ಅವಕಾಶ ನೀಡಿದರೂ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ತಿದ್ದುಪಡಿ (ಕೆಟಿಪಿಪಿ) ಮಸೂದೆ‌ಗೂ ರಾಷ್ಟ್ರಪತಿ ಅಂಗೀಕಾರ ನೀಡಿಲ್ಲ. ವಸತಿ ಇಲಾಖೆಯ ವಿವಿಧ ಮನೆ ಹಂಚಿಕೆ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ 15ರಷ್ಟು ಮೀಸಲಿಡುವ ಸರ್ಕಾರದ ನಿರ್ಧಾರಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ. ಸರ್ಕಾರದ ನಾಮನಿರ್ದೇಶನಗಳಲ್ಲೂ ಪ್ರಾತಿನಿಧ್ಯ ಕಡಿಮೆಯಾಗಿದೆ. ಸರ್ಕಾರ ಇಂತಹ ವಿಷಯಗಳಲ್ಲಿ ನೆರವಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ತನ್ವೀರ್ ಸೇಠ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್, ಶಾಸಕ ರಿಜ್ವಾನ್ ಅರ್ಷದ್‌, ‍ಪಕ್ಷದ ಮುಖಂಡ ಮನ್ಸೂರ್‌ ಅಲಿ ಖಾನ್‌ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.