ADVERTISEMENT

ಅನುಭವ ಮಂಟಪ | ಒಡೆದ ‘ಕಾವೇರಿ ಕುಟುಂಬ’ ಚಾರಿತ್ರಿಕ ಸೋಲು

ವಿಶ್ವದ ಗಮನ ಸೆಳೆದಿದ್ದ ಕುಟುಂಬದ ನಡೆ, ನಿರ್ಮಾಣವಾಗದ ದಾಖಲೆ

ಎಂ.ಎನ್.ಯೋಗೇಶ್‌
Published 30 ಮಾರ್ಚ್ 2021, 19:30 IST
Last Updated 30 ಮಾರ್ಚ್ 2021, 19:30 IST
ಕಾವೇರಿ ಕುಟುಂಬದ ಸಭೆಯೊಂದರ ದೃಶ್ಯ
ಕಾವೇರಿ ಕುಟುಂಬದ ಸಭೆಯೊಂದರ ದೃಶ್ಯ   

ಕಾವೇರಿ ನೀರು ಹಂಚಿಕೆ ವಿವಾದಕ್ಕೆ ರೈತರಿಂದಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಚನೆಯಾದ ‘ಕಾವೇರಿ ಕುಟುಂಬ’ದ ಹೆಜ್ಜೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದು ವಿಶ್ವದ ಪ್ರಥಮ ಪ್ರಯೋಗವಾಗಿದ್ದು ಫಲಿತಾಂಶಕ್ಕೆ ಕಾಯುತ್ತಿರುವುದಾಗಿ ವರ್ಲ್ಡ್‌‌ ವಾಟರ್‌ ಫೋರಂ (ಡಬ್ಲ್ಯುಡಬ್ಲ್ಯುಎಫ್‌) ಹೇಳಿತ್ತು.

ವಿಶ್ವಸಂಸ್ಥೆ ಕೂಡ ಕಾವೇರಿ ಕುಂಟುಂಬದ ಯತ್ನವನ್ನು ಶ್ಲಾಘಿಸಿತ್ತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೈಟೆಡ್‌ ನೇಷನ್‌ ಡೆವೆಲಪ್‌ಮೆಂಟ್‌ ಪ್ರೋಗ್ರಾಂ (ಯುಎನ್‌ಡಿಪಿ) ನಡಾವಳಿಯಲ್ಲಿ ಕುಟುಂಬದ ಪ್ರಯತ್ನವನ್ನು ದಾಖಲಿಸಲಾಗಿತ್ತು. ನೈಲ್‌ನದಿ ಅಚ್ಚುಕಟ್ಟಿನ 9 ದೇಶಗಳ ನಡುವೆ ವಿವಾದವಿದ್ದು ಆ ಎಲ್ಲಾ ದೇಶಗಳ ಪ್ರತಿನಿಧಿಗಳು ಕಾವೇರಿ ಕುಟುಂಬದ ಚಟುವಟಿಕೆ ಅಧ್ಯಯನಕ್ಕೆ ಚೆನ್ನೈಗೆ ಬಂದಿದ್ದರು. ವಿಶ್ವದ ಹಲವು ದೇಶಗಳು ಕಾವೇರಿ ಕುಟುಂಬ ಕೈಗೊಳ್ಳಲಿರುವ ಪರಿಹಾರ ಸೂತ್ರವನ್ನು ಕಾತರದಿಂದ ಕಾಯುತ್ತಿದ್ದವು.

ಕಾವೇರಿ ಕುಟುಂಬ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲವಿದೆ ಎಂದು ಕರ್ನಾಟಕ ಸರ್ಕಾರ ಘೋಷಿಸಿತ್ತು. ರೈತಸಂಘ, ಇತರ ಸಂಘಟನೆಗಳು ಕುಟುಂಬ ಪ್ರತಿನಿಧಿಗಳಿಗೆ ಬೆನ್ನೆಲುಬಾಗಿ ನಿಂತಿದ್ದವು. ಆದರೆ ಇಂಥದ್ದೊಂದು ಬದ್ಧತೆ ತಮಿಳುನಾಡು ಕಡೆಯಿಂದ ಕಂಡುಬರಲಿಲ್ಲ. ರಾಜಕೀಯದಿಂದ ಹೊರತಾಗಿ ಕಾವೇರಿ ಕುಟುಂಬ ರಚನೆಯಾದರೂ ತಮಿಳುನಾಡು ಪ್ರತಿನಿಧಿಗಳು ರಾಜಕಾರಣದಿಂದ ಹೊರಬರಲಿಲ್ಲ. ನಿರ್ಧಾರಗಳಿಗೆ ಬದ್ಧರಾಗಲಿಲ್ಲ, ಸಭೆಯ ನಡಾವಳಿಯನ್ನೇ ಧಿಕ್ಕರಿಸಿದರು. ಹೀಗಾಗಿ ಕಾವೇರಿ ಕುಟುಂಬ ಒಡೆದ ಮನೆಯಾಯಿತು. ಕಡೆಗೆ ವಿಶ್ವದ ಹಲವು ರಾಷ್ಟ್ರಗಳ ಶುಭ ಸುದ್ದಿಯ ನಿರೀಕ್ಷೆ ಕೈಗೂಡಲಿಲ್ಲ, ಇತಿಹಾಸ ನಿರ್ಮಾಣವಾಗಲಿಲ್ಲ. ಈ ವೈಫಲ್ಯವನ್ನು ಹೋರಾಟಗಾರರು ಇತಿಹಾಸದ ಸೋಲು ಎಂದೇ ಬಣ್ಣಿಸುತ್ತಾರೆ.

ADVERTISEMENT

ಕಾವೇರಿ ನ್ಯಾಯಮಂಡಳಿ 1991ರಲ್ಲಿ ಮಧ್ಯಂತರ ತೀರ್ಪು ಪ್ರಕಟಿಸಿದ ನಂತರ ಕರ್ನಾಟಕ–ತಮಿಳುನಾಡು ನಡುವೆ ಸಂಘರ್ಷ ತೀವ್ರ ಸ್ವರೂಪ ಪಡೆಯಿತು. ಎಸ್‌.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರಿ ಪ್ರಾಯೋಜಿತ ಬಂದ್ ಆಚರಣೆಯಿಂದಾಗಿ ‘ತಮಿಳರ ವಿರುದ್ಧ ಕನ್ನಡಿಗರ ಹೋರಾಟ’ ಆರಂಭವಾಗಿತ್ತು.

ಹೋರಾಟದ ಸ್ವರೂಪ ಗಮನಿಸಿದ ಎರಡೂ ರಾಜ್ಯಗಳ ಸಮಾನ ಮನಸ್ಕರು ಸ್ನೇಹಯುತವಾಗಿ ವಿವಾದ ಬಗೆಹರಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದರು. ತಮಿಳುನಾಡಿನ ಪ್ರೊ.ಜನಕರಾಜನ್‌ ಪ್ರಸ್ತಾವಕ್ಕೆ ಕರ್ನಾಟಕದ ನೀರಾವರಿ ತಜ್ಞರು, ಪರಿಸರ ಪ್ರೇಮಿಗಳು, ಚಿಂತಕರು ಒಪ್ಪಿದರು. ಕೇರಳ, ಪುದುಚೇರಿ ತಜ್ಞರನ್ನೂ ಸೇರಿಸಿಕೊಳ್ಳಲಾಯಿತು. 2000ದಲ್ಲಿ ತಮಿಳುನಾಡಿನ ಮದ್ರಾಸ್‌ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ (ಎಂಐಡಿಎಸ್‌) ಮೊದಲ ಪೂರ್ವಭಾವಿ ಸಭೆ ನಡೆಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) 2ನೇ ಪೂರ್ವಭಾವಿ ಸಭೆ ನಡೆಯಿತು.

ನಂತರ ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ ವೇದಿಕೆಯಲ್ಲಿ ‘ಕಾವೇರಿ ಕುಟುಂಬ’ಕ್ಕೆ ಅಂತಿಮ ರೂಪ ನೀಡಲಾಯಿತು. ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ಕರ್ನಾಟಕ ಕುಟುಂಬದ ಮುಖ್ಯಸ್ಥರಾಗಿ, ಪ್ರೊ.ರಂಗನಾಥನ್‌ ತಮಿಳುನಾಡು ಕುಟುಂಬದ ಮುಖ್ಯಸ್ಥರಾಗಿ ಆಯ್ಕೆಯಾದರು. ತಲಾ 14 ಮಂದಿ ರೈತ ಮುಖಂಡರು ಕಾವೇರಿ ಕುಟುಂಬದ ಪ್ರತಿನಿಧಿಗಳಾಗಿ ಸೇರಿದರು. 2003ರಲ್ಲಿ ಅಧಿಕೃತವಾಗಿ ಕಾವೇರಿ ಕುಟುಂಬ ಕಾರ್ಯಚಟುವಟಿಕೆ ಆರಂಭಿಸಿತು.

ಒಂದು ಸಭೆ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ನಡೆದರೆ ಮತ್ತೊಂದು ಸಭೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ನಡೆಯುತ್ತಿತ್ತು. ಒಟ್ಟು ಏಳು ಸಭೆ ನಡೆದವು. ಸರ್ಕಾರದಿಂದ ಒಂದು ಪೈಸೆ ಹಣ ಪಡೆಯದೇ ರೈತ ಮುಖಂಡರು ಸಭೆ ಆಯೋಜಿಸುತ್ತಿದ್ದರು.

ಪರಿಹಾರ ಸೂತ್ರವೇನು?: ನದಿ ಕಣಿವೆಯ ಕೆಳಭಾಗದಲ್ಲಿ ದೊರೆಯುವ ಅಂತರ್ಜಲ ಪ್ರಮಾಣವನ್ನು ಹಲವು ಸಂಸ್ಥೆಗಳು ಗುರುತಿಸಿವೆ. ಕಾವೇರಿ ನ್ಯಾಯಮಂಡಳಿ ಕೂಡ 29 ಟಿಎಂಸಿ ಅಡಿ ಅಂತರ್ಜಲ ಗುರುತಿಸಿದೆ. ಆದರೆ ಇದನ್ನು ತಮಿಳುನಾಡು ತಿರಸ್ಕರಿಸುತ್ತಲೇ ಬಂದಿದ್ದು ಒಟ್ಟಾರೆ ನೀರಿನ ಲಭ್ಯತೆಯ ಪ್ರಮಾಣಕ್ಕೆ ಸೇರಿಸಿಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ.

ಅಂತರ್ಜಲದ ಲಭ್ಯತೆಯನ್ನು ತಮಿಳುನಾಡು ಕುಟುಂಬದ ಸದಸ್ಯರು ಒಪ್ಪಿಕೊಳ್ಳುವಂತೆ ಮಾಡಲು ಕರ್ನಾಟಕ ಕುಟುಂಬ ಸದಸ್ಯರು ಯಶಸ್ವಿಯಾಗಿದ್ದರು. ಹೀಗಾಗಿ ಕಾವೇರಿ ಅಚ್ಚುಕಟ್ಟಿನಲ್ಲಿ ದೊರೆಯುವ ಒಟ್ಟು ನೀರಿನ ಲಭ್ಯತೆಯಲ್ಲಿ (740 ಟಿಎಂಸಿ ಅಡಿ) 10 ಟಿಎಂಸಿ ಅಡಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಕೊಡಲು ತಮಿಳುನಾಡು ಸದಸ್ಯರು ಒಪ್ಪಿದ್ದರು.

ಜೊತೆಗೆ ಬೆಂಗಳೂರಿನ ಜನರ ಕುಡಿಯುವ ನೀರಿಗಾಗಿ 10 ಟಿಎಂಸಿ ಅಡಿ ಹೆಚ್ಚುವರಿ ಕೊಡುವಂತೆ ಒತ್ತಾಯ ಮಾಡಲಾಗಿತ್ತು. 5 ಟಿಎಂಸಿ ಅಡಿ ಬೆಂಗಳೂರಿಗೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಕರ್ನಾಟಕದ ಪ್ರತಿನಿಧಿ
ಗಿಳಿಗಿತ್ತು. ನಂತರ ಕಾವೇರಿ ಕುಟುಂಬದ ತೀರ್ಮಾನವನ್ನು ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳ ಮುಂದೆ ಮಂಡಿಸುವ ಮಾತುಕತೆಯೂ ನಡೆದಿತ್ತು.

ಆದರೆ, ಈ ವೇಳೆ 2007ರಲ್ಲಿ ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿತು. ಜೊತೆಗೆ ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸಿತು. ಇದರಿಂದಾಗಿ ತಮಿಳುನಾಡು ರೈತರು ಕಾವೇರಿ ಕುಟುಂಬದ ಚಟುವಟಿಕೆಯಿಂದ ದೂರ ಉಳಿದರು. ತಮಿಳುನಾಡು, ಕರ್ನಾಟಕ ಸರ್ಕಾರಗಳು ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಾವೇರಿ ಕುಟುಂಬ ಒಡೆದು ಹೋಯಿತು.

ಪ್ರಜಾಪ್ರಭುತ್ವವನ್ನು ಸೋಲಿಸಿದರು

‘2017ರ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಕರ್ನಾಟಕಕ್ಕೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಸಿಕ್ಕಿದ್ದು ನಾವು ತೃಪ್ತಿ ಪಟ್ಟುಕೊಂಡಿದ್ದೇವೆ. ಆದರೆ, ಇಷ್ಟೇ ಪ್ರಮಾಣದ ನೀರು 10 ವರ್ಷಗಳ ಹಿಂದೆ ಕಾವೇರಿ ಕುಟುಂಬದ ಮೂಲಕವೇ ದಕ್ಕಿತ್ತು. ಆದರೆ ತಮಿಳುನಾಡು ರೈತರ ದುಷ್ಟತನ, ಧೂರ್ತತನದಿಂದಾಗಿ ಕುಟುಂಬದ ಚರ್ಚೆ ಸಾಕಾರವಾಗಲಿಲ್ಲ. ಅವರು ಇತಿಹಾಸ ನಿರ್ಮಿಸಲು ಅವಕಾಶ ಕೊಡಲಿಲ್ಲ. ಆ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಸೋಲಿಸಿದರು’ ಎಂದು ಕಾವೇರಿ ಕುಟುಂಬದ ಮುಖ್ಯಸ್ಥ ಪ್ರೊ.ಕೆ.ಸಿ.ಬಸವರಾಜು ಬೇಸರ ವ್ಯಕ್ತಪಡಿಸಿದರು.

ಜಯಲಲಿತಾ ಭಯ!

‘ತಮಿಳುನಾಡು ರೈತ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯವಿತ್ತು. ಮುಂದಿನ ಚುನಾವಣೆಯಲ್ಲಿ ಜಯಲಲಿತಾ ಸರ್ಕಾರ ಬರಲಿದ್ದು ಅವರು ತಮಿಳುನಾಡಿನ ಹಿತ ಕಾಯುತ್ತಾರೆ. ತೀರ್ಮಾನ ಕೈಗೊಳ್ಳುವ ತೊಂದರೆಯನ್ನು ತಾವೇಕೆ ಹೊರಬೇಕು ಎಂಬ ಮನೋಭಾವ ಅವರಲ್ಲಿತ್ತು. ಹೀಗಾಗಿ ಕಾವೇರಿ ಕುಟುಂಬಕ್ಕೆ ಸೋಲಾಯಿತು’ ಎನ್ನುತ್ತಾರೆ ಮದ್ರಾಸ್‌ ಅಭಿವೃದ್ಧಿ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ವಿ.ಕೆ.ನಟರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.