ADVERTISEMENT

ಮುಜರಾಯಿ ದೇವಸ್ಥಾನಗಳ ಮೇಲೆ ಖಾಸಗಿ ಕಣ್ಣು

ಅರ್ಚಕ, ಆಗಮಿಕರ, ಉಪಾಧಿವಂತರ ಒಕ್ಕೂಟದಿಂದ ವಿರೋಧ

ಬಾಲಕೃಷ್ಣ ಪಿ.ಎಚ್‌
Published 26 ಡಿಸೆಂಬರ್ 2024, 0:53 IST
Last Updated 26 ಡಿಸೆಂಬರ್ 2024, 0:53 IST
ಮುಜರಾಯಿ ಇಲಾಖೆ
ಮುಜರಾಯಿ ಇಲಾಖೆ   

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ‘ಸಿ’ ವರ್ಗದ ದೇವಸ್ಥಾನಗಳ ಮೇಲೆ ಖಾಸಗಿಯವರ ಕಣ್ಣು ಬಿದ್ದಿದೆ.

ಇದಕ್ಕೆ ಅರ್ಚಕರ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ನಿಯಂತ್ರಣದಲ್ಲಿಯೇ ಮುಜರಾಯಿ ದೇವಸ್ಥಾನಗಳು ಇರಬೇಕು ಎಂದು ಆಗ್ರಹಿಸಿದೆ.

‘ಹಳೆ ಮೈಸೂರು ಭಾಗದ ಪ್ರಭಾವಿ ಮಠದ ಪೀಠಾಧಿಪತಿಯವರು ಮೂರು ವರ್ಷಗಳ ಹಿಂದೆ, ಬಿಜೆಪಿ ಸರ್ಕಾರದ ಮುಜರಾಯಿ ಸಚಿವರನ್ನು ತಮ್ಮ ಮಠಕ್ಕೆ ಕರೆಸಿಕೊಂಡಿದ್ದರು. ಆದಾಯ ಇಲ್ಲದ ದೇವಸ್ಥಾನಗಳನ್ನು ನಮಗೆ ಕೊಡಿ. ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಸಚಿವರಲ್ಲಿ ಕೇಳಿಕೊಂಡಿದ್ದರು. ಆದರೆ, ಮುಜರಾಯಿ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ ಎಂದು ಅಂದಿನ ಸಚಿವರು ತಿಳಿಸಿದ್ದರು’ ಎಂದು ಮೂಲಗಳು ಹೇಳಿವೆ.

ADVERTISEMENT

‘ಅರ್ಚಕರಿಗೆ ಸರ್ಕಾರವು ನಿವೃತ್ತಿ ವಯಸ್ಸು ನಿಗದಿ ಮಾಡಿದ್ದನ್ನು ನಾವು ಪ್ರಶ್ನಿಸಿದ್ದೆವು. ಹೈಕೋರ್ಟ್‌ನಲ್ಲಿ ಸರ್ಕಾರದ ಪರ ಆದೇಶ ಬಂದಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೆವು. ಅಲ್ಲಿ ನಮ್ಮ ಪರ ತಡೆಯಾಜ್ಞೆ ಬಂದಿದೆ. ಈ ಪ್ರಕರಣವೇ ‘ಸಿ’ ವರ್ಗದ ದೇವಸ್ಥಾನಗಳನ್ನು ಖಾಸಗಿಯವರಿಗೆ ಒಪ್ಪಿಸುವುದಕ್ಕೂ ಅಡ್ಡಿಯಾಗಿತ್ತು’ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಎನ್‌. ದೀಕ್ಷಿತ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆದರೆ, ಬಲಿಷ್ಠ ಸಮುದಾಯಕ್ಕೆ ಸೇರಿದ ಆ ಮಠದವರು ಆನಂತರವೂ ಸುಮ್ಮನೆ ಕುಳಿತಿಲ್ಲ. ‘ಸಿ’ ಗ್ರೇಡ್‌ ದೇವಸ್ಥಾನಗಳನ್ನು ವಶಕ್ಕೆ ಪಡೆಯಲು ತೆರೆಮರೆಯಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ ಎಂದು ತಿಳಿಸಿದರು.

ಅರ್ಚಕರಾಗಬೇಕಿದ್ದರೆ ಆಗಮ ಪರೀಕ್ಷೆ ಉತ್ತೀರ್ಣರಾಗಿರಬೇಕು. ಅಂದರೆ ಪ್ರವರ ಮತ್ತು ಪ್ರವೀಣ ಪರೀಕ್ಷೆ ಬರೆದು ತೇರ್ಗಡೆಯಾಗಿರಬೇಕು. ಈ ಮಠದಲ್ಲಿ ಈಗಾಗಲೇ 25 ಸಾವಿರಕ್ಕೂ ಅಧಿಕ ಮಂದಿ ಉತ್ತೀರ್ಣರಾಗಿದ್ದಾರೆ. ಅವರನ್ನು ದೇವಸ್ಥಾನಗಳಿಗೆ ತಂದು ಕೂರಿಸುವ ಹುನ್ನಾರ ಇದು. ದೇವಸ್ಥಾನಗಳು ಅವರ ಸುಪರ್ದಿಗೆ ಹೋದ ಕೂಡಲೇ ಅರ್ಚಕರೆಲ್ಲ ಬದಲಾಗಿ ಬಿಡುತ್ತಾರೆ ಎಂದಲ್ಲ. ಅರ್ಚಕರು ಅವರು ಹೇಳಿದಂತೆ ಕೇಳಬೇಕು ಎಂದು ನಿಯಮ ರೂಪಿಸಿ, ಅದಕ್ಕೆ ಒಪ್ಪದವರನ್ನು ಬದಲಾಯಿಸಬಹುದು’ ಎಂದು ದೇವಸ್ಥಾನಗಳ ಅರ್ಚಕರು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರವು ನಿಯಮ ಪ್ರಕಾರವೇ ₹25 ಲಕ್ಷಕ್ಕಿಂತ ಅಧಿಕ ವರಮಾನ ಇರುವ ‘ಎ’ ಮತ್ತು ₹5 ಲಕ್ಷದಿಂದ ₹25 ಲಕ್ಷವರೆಗೆ ವರಮಾನ ಇರುವ ‘ಬಿ’ ದರ್ಜೆಯ ದೇವಸ್ಥಾನಗಳ ಆದಾಯದಲ್ಲಿ ಶೇ 10ರಷ್ಟನ್ನು ‘ಸಿ’ ದರ್ಜೆ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ’ ಎಂದು ಒಕ್ಕೂಟದ ಪದಾಧಿಕಾರಿಗಳು ದೂರಿದರು.

ಖಾಸಗೀಕರಣವಿಲ್ಲ ಅಭಿವೃದ್ಧಿಗೆ ಅವಕಾಶ

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಗೆ (ಮುಜರಾಯಿ) ಒಳಪಟ್ಟಿರುವ ಯಾವುದೇ ದೇವಸ್ಥಾನವನ್ನು ಖಾಸಗೀಕರಣ ಮಾಡುವುದಿಲ್ಲ. ಖಾಸಗೀಕರಣಕ್ಕೆ ಯಾರೂ ಕೇಳಿಯೂ ಇಲ್ಲ. ದೇವಸ್ಥಾನವನ್ನು ಅಭಿವೃದ್ಧಿ ಮಾಡಬೇಕು ಎಂದು ಯಾರಿಗಾದರೂ ಅನ್ನಿಸಿದರೆ ಅದಕ್ಕೆ ಸಂಬಂಧಿಸಿದಂತೆ ಸಮಿತಿ ಮಾಡುತ್ತೇವೆ. ಸಮಿತಿಯ ಮೂಲಕ ಅಭಿವೃದ್ಧಿಗೆ ಕೈಜೋಡಿಸಬಹುದು. ಆದರೆ ದೇವಸ್ಥಾನದ ಆಡಳಿತ ಇನ್ನಿತರ ವಿಚಾರಗಳಲ್ಲಿ  ಅವಕಾಶ ಇರುವುದಿಲ್ಲ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ಕೇಳುವ ಅಪಾಯ

‘ಈಗ ಒಂದು ಸಮಯದಾಯದ ಮಠದವರು ಮುಜರಾಯಿ ದೇವಸ್ಥಾನಗಳನ್ನು ಕೇಳುತ್ತಿದ್ದಾರೆ. ಮುಂದೆ ಬೇರೆ ಬೇರೆ ಸಮುದಾಯದವರು ಕೇಳಲು ಆರಂಭಿಸಬಹುದು. ಸರ್ಕಾರ ಇದಕ್ಕೆಲ್ಲ ಮಣಿಯದೇ ತನ್ನದೇ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ‘ಸಿ’ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕಾದ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮುಜರಾಯಿ ಸಚಿವರಿಗೆ ಮನವಿ ನೀಡಿದ್ದೇವೆ’ ಎಂದು ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಎನ್‌. ದೀಕ್ಷಿತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.