ADVERTISEMENT

ಜವನಮ್ಮನ ಹೋಟೆಲ್‌ನಲ್ಲಿ ರೂಪಾಯಿಗೆ ಒಂದ್‌ ಇಡ್ಲಿ!

ದೊಡ್ಡಪಾಳ್ಯ ಗ್ರಾಮದಲ್ಲಿ 40 ವರ್ಷಗಳಿಂದ ಮಾರಾಟ, ನಾಲ್ಕಾಣೆಯಿಂದ ಆರಂಭ

ಗಣಂಗೂರು ನಂಜೇಗೌಡ
Published 7 ಮಾರ್ಚ್ 2020, 19:45 IST
Last Updated 7 ಮಾರ್ಚ್ 2020, 19:45 IST
ದೊಡ್ಡಪಾಳ್ಯದ ಬನ್ನೂರು– ಶ್ರೀರಂಗಪಟ್ಟಣ ರಸ್ತೆ ಪಕ್ಕದ ಶೆಡ್‌ನಲ್ಲಿ ಗ್ರಾಹಕರಿಗೆ ಇಡ್ಲಿ ನೀಡಿರುತ್ತಿರುವ ಜವನಮ್ಮ
ದೊಡ್ಡಪಾಳ್ಯದ ಬನ್ನೂರು– ಶ್ರೀರಂಗಪಟ್ಟಣ ರಸ್ತೆ ಪಕ್ಕದ ಶೆಡ್‌ನಲ್ಲಿ ಗ್ರಾಹಕರಿಗೆ ಇಡ್ಲಿ ನೀಡಿರುತ್ತಿರುವ ಜವನಮ್ಮ   

ಶ್ರೀರಂಗಪಟ್ಟಣ: ಇಂದಿನ ದುಬಾರಿ ದುನಿಯಾದಲ್ಲಿ ಒಂದು ರೂಪಾಯಿಗೆ ಚಾಕೊಲೇಟ್‌ ಕೂಡ ಸಿಗುತ್ತಿಲ್ಲ. ಹೀಗಿರುವಾಗ ಇಲ್ಲೊಬ್ಬರು ವೃದ್ಧೆ ಒಂದು ರೂಪಾಯಿಗೆ ಒಂದು ಇಡ್ಲಿ ಮಾರಾಟ ಮಾಡುತ್ತಿದ್ದು, ನೂರಾರು ಜನರ ಹೊಟ್ಟೆ ತುಂಬಿಸುತ್ತಿದ್ದಾರೆ.

ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಜವನಮ್ಮ ಕಳೆದ 40 ವರ್ಷಗಳಿಂದ ಶೆಡ್‌ ಹೋಟೆಲ್‌ನಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದು, ಸುತ್ತಮುತ್ತಲ ಹಳ್ಳಿಗಳಲ್ಲಿ ’ಇಡ್ಲಿ ಜವನಮ್ಮ’ ಎಂದೇ ಹೆಸರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ 7ರಿಂದ 10 ಗಂಟೆ ವರೆಗೆ ಇವರ ಶೆಡ್‌ ಹೋಟೆಲ್‌ನಲ್ಲಿ ಬಿಸಿ ಬಿಸಿ ಇಡ್ಲಿ ಸಿಗುತ್ತದೆ. ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮರಳಾಗಾಲ, ಹಂಗರಹಳ್ಳೀ, ಬಸವನಪುರ, ಮುಂಡುದೊರೆ ಗ್ರಾಮಗಳ ಜನರು ಈ ಹೋಟೆಲ್‌ನ ಗ್ರಾಹಕರು. ಬಹುತೇಕ ಕೃಷಿ ಕಾರ್ಮಿಕರು ಜವನಮ್ಮ ಅವರ ಹೋಟೆಲ್‌ನ ಇಡ್ಲಿ ತಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೇವಲ ₹ 10ಕ್ಕೆ ಹೊಟ್ಟೆತುಂಬ ತಿಂದು ತೇಗುತ್ತಾರೆ.

ನಾಲ್ಕಾಣೆಯಿಂದ ಶುರು: ಜವನಮ್ಮ ಇಡ್ಲಿ ಮಾರಾಟ ಮಾಡಲು ಶುರು ಮಾಡಿ 40 ವರ್ಷಗಳೇ ಕಳೆದಿವೆ. ಆರಂಭದ ದಿನಗಳಲ್ಲಿ ನಾಲ್ಕಾಣೆಗೆ ಒಂದು ಇಡ್ಲಿ ಮಾರಾಟ ಮಾಡುತ್ತಿದ್ದರು. ನಂತರ ಎಂಟಾಣೆ, ಆಮೇಲೆ ಹನ್ನೆರಡಾಣೆಗೆ ಮಾರುತ್ತಿದ್ದರು. ಕಳೆದ 5 ವರ್ಷಗಳಿಂದ ಒಂದು ಇಡ್ಲಿಗೆ ಒಂದು ರೂಪಾಯಿ ನಿಗದಿ ಮಾಡಿದ್ದಾರೆ. ಕಡ್ಲೆ ಚಟ್ನಿ ಜತೆ ಬಿಸಿಬಿಸಿ ಅಕ್ಕಿ ಇಡ್ಲಿ ತಿಂದವರು ಮತ್ತೆ ಬೇಕು ಎನ್ನುವಂತಿರುತ್ತದೆ.

ADVERTISEMENT

ಬದಲಾಗದ ಶೆಡ್ಡು: ಅಷ್ಟು ವರ್ಷಗಳಿಂದ ಇಡ್ಲಿ ವ್ಯಾಪಾರ ಮಾಡುತ್ತಿರುವ ಜವನಮ್ಮ ಅವರಿಗೆ ಒಂದು ಪುಟ್ಟ ಮನೆ ಬಿಟ್ಟರೆ ಬೇರೆ ಚರ, ಸ್ಥಿರ ಆಸ್ತಿಯಿಲ್ಲ. ಮಗ ಕೊಲೆಯಾಗಿ ಹೋದ. ಮಗಳು ಪ್ರೀತಿಸಿದವನ ಹಿಂದೆ ಹೋದಳು. ಗಂಡು ಸತ್ತು ಎಷ್ಟೋ ವರ್ಷಗಳಾದವು. ಸದ್ಯ ಜವನಮ್ಮ ಅವರದ್ದು ಒಬ್ಬಂಟಿ ಬದುಕು. ಐದಾರು ವರ್ಷಗಳಿಂದ ದಮ್ಮು, ಬಿಪಿ ಕಾಯಿಲೆಗಳು ಬೆನ್ನಿಗಂಟಿದ ಬೇತಾಳದಂತೆ ಕಾಡುತ್ತಿವೆ. ಆದರೆ ಜವನಮ್ಮ ದುಡಿದು ತಿನ್ನುವ ಛಲ ಜವನಮ್ಮ ಬಿಟ್ಟಿಲ್ಲ. ಯಾರ ಬಳಿಯೂ ಕೈಚಾಚದೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.

’ಜವನಮ್ಮನ ಶೆಡ್‌ ಹೋಟೆಲ್‌ ಇಡ್ಲಿಯನ್ನು 30 ವರ್ಷಗಳಿಂದ ತಿನ್ನುತ್ತಿದ್ದೇನೆ. ಇಲ್ಲಿ ಒಂದು ಬೀಡಿ ಕಾಸಿಗೆ ಒಂದು ಇಡ್ಲಿ ಸಿಗುತ್ತದೆ. ಈ ಬೆಲೆಗೆ ಇಂದಿರಾ ಕ್ಯಾಂಟೀನ್‌ನಲ್ಲೂ ಆಹಾರ ಸಿಗುವುದಿಲ್ಲ. ಒಂದರ್ಥದಲ್ಲಿ ಜವನಮ್ಮ ಪುಕ್ಕಟೆ ಕೊಟ್ಟಂತೆ ಇಡ್ಲಿ ಕೊಡುತ್ತಿದ್ದಾರೆ’ಎಂದು ಜೆಡಿಎಸ್‌ ರೈತ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ. ರವಿ ಹೇಳುತ್ತಾರೆ.

’ನನಗೂ ಹತ್‌ ಹತ್ರ 70 ವರ್ಷ ಆಯ್ತು. ಸೌದೆ ಹೊಲೆಯ ಹೊಗೆ ಕುಡ್ದು ಕುಡ್ದು ದಮ್ಮು ಬಂತು. ಈಗ ಬಿಪಿನೂ ಬಂದದೆ. ಹಂಗಂತ ಕೂತ್ಕಳಕೆ ಆಯ್ತದಾ? ಮೈಯಲ್ಲಿ ಶಕ್ತಿ ಇರಾಗಂಟ ಕೆಲಸ ಮಾಡ್ತೀನಿ. ಅಕ್ಕಿ ತಂದು, ರುಬ್ಬಿ, ಇಡ್ಲಿ ಮಾಡಿ ಮಾರಾಟ ಮಾಡ್ತೀನಿ. ಒಂದೊಂದ್ ದಿನ 300, 400 ರೂಪಾಯಿಗಂಟ ಯಾಪಾರ ಆಯ್ತದೆ. ನಂಗೆ ಇಪ್ಪೈದು ಮೂವತ್ರೂಪಾಯಿ ವರೆಗೂ ಸಿಗ್ತದೆ. ನಂಗೆ ಅಷ್ಟ್ ಸಾಕು’ ಎಂದು ಜವನಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.